ಬಂಟ್ವಾಳ: ಹಳ್ಳಿ ಪ್ರದೇಶದಲ್ಲಿ ಬೆಳೆದ ಯುವಕನೋರ್ವ ಬದುಕಿನ ಬುತ್ತಿಗಾಗಿ ಜೇನು ಪೆಟ್ಟಿಗೆ ತಯಾರಿಕೆ ವೃತ್ತಿಗೆ ಇಳಿದ ಕತೆ ಇದು. ಮನೆಯ ವಠಾರವನ್ನು ಸಣ್ಣ ಕೈಗಾರಿಕಾ ಘಟಕವನ್ನಾಗಿ ರೂಪಿಸಿದರೆ, ಮನೆಯ ಸುತ್ತಮುತ್ತಲಿನ ಪರಿಸರವನ್ನು ಸಮೃದ್ಧ ಕೃಷಿ ತೋಟವನ್ನಾಗಿ, ಜೇನು ಸಾಕಾಣಿಕಾ ಪ್ರದೇಶವನ್ನಾಗಿ ನಿರ್ಮಿಸಿದ್ದು, ರಾಜ್ಯಾದ್ಯಂತ ಜೇನು ಕೃಷಿಕರು ಇಲ್ಲಿಗೆ ಬರುವಂತಾಗಿದೆ.
ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಬಡೆಕ್ಕೋಡಿ ಸುಧಾಕರ ಪೂಜಾರಿಯವರು ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಹೊಟ್ಟೆಪಾಡಿಗಾಗಿ ಪುತ್ತೂರಿನ ಜೇನು ಪೆಟ್ಟಿಗೆ ತಯಾರಿಕೆಯ ಘಟಕವೊಂದಕ್ಕೆ ಸೇರಿಕೊಂಡರು. ಅಲ್ಲಿ ಸುಮಾರು 18 ವರ್ಷಗಳ ಅನುಭವ ಪಡೆದು, ಸ್ವಂತ ಉದ್ದಿಮೆ ಸ್ಥಾಪಿಸುವ ಕನಸೊಂದ ಸಾಕಾರಗೊಳ್ಳುವತ್ತ ಹೆಜ್ಜೆಯಿಟ್ಟರು. ಎರಡು ವರ್ಷಗಳ ಹಿಂದೆ ತನ್ನ ಮನೆಯ ಹತ್ತಿರವೇ ಸಣ್ಣಮಟ್ಟದ ಜೇನು ಪೆಟ್ಟಿಗೆ ತಯಾರಿಕಾ ಶೆಡ್ ಒಂದನ್ನು ನಿರ್ಮಿಸಿಕೊಂಡು ಜೇನು ಪೆಟ್ಟಿಗೆಯ ಬೇಡಿಕೆಗೆ ಅನುಗುಣವಾಗಿ ಪೆಟ್ಟಿಗೆ ತಯಾರಿಸಲು ಆರಂಭಿಸಿದರು. ಜೇನು ವ್ಯವಸಾಯ ಸಹಕಾರಿ ಸಂಘ ಹಾಗೂ ಖಾಸಗಿ ಜೇನು ಕೃಷಿಕರ ಬೇಡಿಕೆ ಹೆಚ್ಚುತ್ತಾ ಹೋದಂತೆ ಸುಧಾಕರ ಪೂಜಾರಿ ತನ್ನ ಘಟಕವನ್ನು ವಿಸ್ತರಿಸಿ, ಕೇವಲ ಜೇನು ಪೆಟ್ಟಿಗೆಯಲ್ಲದೇ, ಜೇನು ಸಂಸ್ಕರಣಾ ಯಂತ್ರ, ಪೆಟ್ಟಿಗೆ ಸ್ಟ್ಯಾಂಡ್, ಕೃತಕ ಮೇಣದ ಹಾಳೆ, ಮುಖಪರದೆ, ಹೊಗೆತಿದಿ ಹೀಗೆ ಜೇನು ಕೃಷಿಯಲ್ಲಿ ಬಳಸಲ್ಪಡುವ ಪೂರ್ಣ ಪ್ರಮಾಣದ ಪರಿಕರಗಳನ್ನು ತನ್ನ ಘಟಕದಲ್ಲಿಯೇ ತಯಾರಿಸುವಲ್ಲಿ ಯಶಸ್ವಿಯಾದರು.
ಜೇನು ಪೆಟ್ಟಿಗೆ ತಯಾರಿಕೆಯ ಮೂಲ ಉದ್ದೇಶವನ್ನಿಟುಕೊಂಡ ಸುಧಾಕರ ಪೂಜಾರಿಯವರನ್ನು ತೋಟಗಾರಿಕಾ ಇಲಾಖೆ ಪ್ರಗತಿಪರ ಜೇನು ಕೃಷಿಕನ್ನಾಗಿ ರೂಪಿಸಲು ಪ್ರೇರಣೆ ನೀಡಿತು. ಜೇನು ಕೃಷಿಕರಿಗೆ ಜೇನು ಪೆಟ್ಟಿಗೆಯೊಂದಿಗೆ ಜೇನು ಕುಟುಂಬವನ್ನೂ ಇಲಾಖಾ ವತಿಯಿಂದ ನೀಡಲಾಗುತ್ತದೆ. ಅದಕ್ಕಾಗಿ ಅವರು ಎರಡು ವರ್ಷಗಳ ಹಿಂದೆ ಜೇನು ಸಾಕಾಣಿಕೆಯನ್ನು ಆರಂಭಿಸಿದರು. ಹಾಗೆ ಆರಂಭವಾದ ಜೇನು ಕೃಷಿ ಪ್ರಗತಿಯತ್ತ ಸಾಗಿದ್ದು, ಅವರ ಅಡಕೆ ತೋಟ ಹಾಗೂ ಸುತ್ತಮುತ್ತಲು ಸುಮಾರು 400 ಜೇನು ಪೆಟ್ಟಿಗೆಗಳಿವೆ. ಅವರು ಜೇನು ಸಂಗ್ರಹದೊಂದಿಗೆ ಜೇನು ಕುಟುಂಬವನ್ನು ಅಭಿವೃದ್ಧಿ ಪಡಿಸಿ, ರೈತರಿಗೆ ಒದಗಿಸುತ್ತಿದ್ದಾರೆ. ಪತ್ನಿ ಹರಿಣಾಕ್ಷಿ, ಮಕ್ಕಳಾದ ವಿಶ್ರುತ್, ಪ್ರಾಪ್ತಿ ಜೇನು ಕುಟುಂಬ ಪ್ರತ್ಯೇಕಿಸುವ, ರಾಣಿ ಜೇನುನೊಣಗಳ ಅಭಿವೃದ್ಧಿ ಇನ್ನಿತರ ಕೆಲಸಗಳ ಜವಾಬ್ದಾರಿ ಹೊತ್ತಿದ್ದಾರೆ.
Kshetra Samachara
08/12/2020 10:28 pm