ಮಂಗಳೂರು: ಕೋವಿಡ್ ನಿಂದ ದೇಶದ ವಿವಿಧೆಡೆ ಉಂಟಾಗಿರುವ ಪರಿಣಾಮದ ಕುರಿತು ಅಧ್ಯಯನ ನಡೆಸುವ ಮತ್ತು ಸಂತ್ರಸ್ತರಿಗೆ ನೆರವಾಗುವ ಉದ್ದೇಶದಿಂದ ಮೂವರ ತಂಡ ‘ರೋಡ್ ಆಶ್ರಮ್’ ಅಭಿಯಾನ ಹಮ್ಮಿಕೊಂಡಿದೆ. ಈ ತಂಡ ಸೋಮವಾರ ಮಂಗಳೂರು ತಲುಪಿದೆ.
ಕಾರಿನ ಹೊರಗಡೆ ರಾಷ್ಟ್ರಧ್ವಜ, ದೇಶದ ವಿವಿಧ ಕಲಾಪ್ರಕಾರ ಪ್ರತಿಬಿಂಬಿಸುವ ಚಿತ್ರ ಇತ್ಯಾದಿ ಒಳಗೊಂಡ ಸ್ಟಿಕ್ಕರ್‌ಗಳಿಂದ ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಅಕ್ಟೋಬರ್ 4ರಂದು ಹೊಸದಿಲ್ಲಿಯಿಂದ ಹೊರಟಿರುವ ತಂಡ ಬೇರೆ ಬೇರೆ ರಾಜ್ಯ ಸುತ್ತಾಡಿ ಮಂಗಳೂರಿಗೆ ಆಗಮಿಸಿದೆ.
ಮುಂದೆ ಗೋವಾದತ್ತ ಪ್ರಯಾಣ ಬೆಳೆಸಲಿದೆ. ಕೊರೊನಾದಿಂದ ಉಂಟಾಗಿರುವ ಆರ್ಥಿಕ, ಸಾಮಾಜಿಕ ಸಮಸ್ಯೆ ಖುದ್ದಾಗಿ ತೆರಳಿ ಅಧ್ಯಯನ ನಡೆಸಿ ಅದನ್ನು ದಾಖಲೀಕರಣ ಮಾಡಲಿದೆ. ಕೊರೊನಾದಿಂದ ತೊಂದರೆಗೀಡಾದವರಿಗೆ ನೆರವಾಗುವುದಕ್ಕೆ ದೇಣಿಗೆ ಸಂಗ್ರಹಿಸುವುದು ಈ ಅಭಿಯಾನದ ಉದ್ದೇಶ. ಗಡಿ ಸೇರಿದಂತೆ ದೇಶದುದ್ದಕ್ಕೂ ಸುಮಾರು 30,000 ಕಿ.ಮೀ. ಸಂಚರಿಸುವ ಉದ್ದೇಶ ಹೊಂದಲಾಗಿದ್ದು, ಈಗಾಗಲೇ 15,000 ಕಿ.ಮೀ. ಪೂರ್ಣಗೊಳಿಸಲಾಗಿದೆ.
Kshetra Samachara
24/11/2020 10:59 am