ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಭಿಕ್ಷೆ ಬೇಡಿ ಮಗುವಿನ‌ ಚಿಕಿತ್ಸೆಗೆ ನೆರವಾದರು ಮಂಗಳಮುಖಿಯರು!

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಎರಡು ಸಾವಿರದಷ್ಟು ಮಂಗಳ ಮುಖಿಯರಿದ್ದು, ಇವರ ಪೈಕಿ ಮುನ್ನೂರರಷ್ಟು ಜನ ಮುಖ್ಯವಾಹಿನಿಯಲ್ಲಿದ್ದಾರೆ. ತಮ್ಮದೇ 'ಆಶ್ರಯ ಸಮುದಾಯ ಸಂಘಟನೆ' ಕಟ್ಟಿಕೊಂಡಿರುವ ಇವರು ಸಮಾಜಕ್ಕೆ ತಾವೇನಾದರೂ ಮಾಡಬೇಕು ಎಂಬ ಕಳಕಳಿ ಇಟ್ಟುಕೊಂಡಿದ್ದಾರೆ.

ಆಶ್ರಯ ಸಮುದಾಯ ಸಂಘಟನೆಯ ಸದಸ್ಯರಾದ ಸಮೀಕ್ಷಾ, ಸಾನ್ವಿ, ರೇಖಾ ,ಸಂಧ್ಯಾ ,ನಿಶಾ, ಲಾವಣ್ಯ ಎಂಬವರ ತಂಡ ಉಡುಪಿ ಜಿಲ್ಲೆಯಾದ್ಯಂತ ಭಿಕ್ಷಾಟನೆ ಮಾಡಿ ಎರಡೂವರೆ ವರ್ಷದ ಮಗುವಿನ ಕಾಯಿಲೆಗೆ ಹಣ ನೀಡುವ ಮೂಲಕ ಮಿಡಿದಿದ್ದಾರೆ.

ಪಕ್ಕದ ದ.ಕ. ಜಿಲ್ಲೆಯ ಆರಾಧ್ಯ ಎಂಬ ಎರಡೂವರೆ ವರ್ಷದ ಹೆಣ್ಣು ಮಗುವಿಗೆ ಶ್ರವಣದೋಷದ ಜೊತೆಗೆ ಮಾತನಾಡುವ ಸಮಸ್ಯೆಯೂ ಇತ್ತು. ಇದನ್ನು ಸಾಮಾಜಿಕ ಜಾಲತಾಣದ ಮೂಲಕ ನೋಡಿದ ಸಮೀಕ್ಷಾ, ತಮ್ಮ ತಂಡ ಕಟ್ಟಿಕೊಂಡು ಮಗುವಿನ‌ ಸರ್ಜರಿಗಾಗಿ ಹಣ ಸಂಗ್ರಹ ಮಾಡಿದ್ದಾರೆ.

ಖುದ್ದು ಎಂಬಿಎ ಪದವೀಧರೆಯಾಗಿರುವ ಸಮೀಕ್ಷಾ ನೇತೃತ್ವದಲ್ಲಿ ಉಡುಪಿ, ಕಾರ್ಕಳ, ಮಣಿಪಾಲ ಮುಂತಾದೆಡೆ ಸಂಚರಿಸಿ ತಮ್ಮ ಕೈಲಾದಷ್ಟು ಹಣ ಸಂಗ್ರಹ ಮಾಡಿ ಮಗುವಿನ ಚಿಕಿತ್ಸೆಗೆ ನೀಡಿದ್ದಾರೆ.

ಮಗುವಿನ ಕಿವಿ ಸರ್ಜರಿಗೆ14 ಲಕ್ಷ ರೂ. ಅವಶ್ಯಕತೆ ಇತ್ತು ಮತ್ತು ಮೂರು ತಿಂಗಳ ಒಳಗೆ ಮಗುವಿಗೆ ಸರ್ಜರಿ ಮಾಡಲೇಬೇಕಿತ್ತು. ಅಷ್ಟೊಂದು ದುಡ್ಡು ಸಂಗ್ರಹ ಮಾಡಲಾಗದಿದ್ದರೂ, ತಮ್ಮ ಕೈಲಾದಷ್ಟು ಸಂಗ್ರಹಿಸಿ ಮಗುವಿಗೆ ನೀಡಿದ್ದು, ಬೆಲೆ ಕಟ್ಟಲಾಗದ ಮಾನವೀಯತೆಯೇ ಹೌದು.

ಇಷ್ಟೇ ಅಲ್ಲದೆ, ಲಾಕ್ ಡೌನ್ ಸಂದರ್ಭದಲ್ಲೂ ಈ ಮಂಗಳಮುಖಿಯರ ತಂಡ ನಿರ್ಗತಿಕರಿಗೆ, ಅಶಕ್ತರಿಗೆ ಬಿರಿಯಾನಿ ಪೊಟ್ಟಣ ಮಾಡಿ ವಿತರಿಸಿದೆ, ಅಕ್ಕಿ, ಧಾನ್ಯಗಳ ಕಿಟ್ ನೀಡಿ‌ ಮಾನವೀಯತೆ ಮೆರೆದಿದೆ. ಸಮಾಜಕ್ಕೆ ಏನಾದರೂ‌ ನೀಡಬೇಕು ಎಂಬ ಈ ಮಂಗಳಮುಖಿಯರ ತುಡಿತ ಎಲ್ಲರಿಗೂ ಮಾದರಿ.

Edited By : Nagesh Gaonkar
Kshetra Samachara

Kshetra Samachara

18/11/2020 03:22 pm

Cinque Terre

28.51 K

Cinque Terre

16

ಸಂಬಂಧಿತ ಸುದ್ದಿ