ಕಾಸರಗೋಡು: ನಮ್ಮ ಕರಾವಳಿ ಜಿಲ್ಲೆಗಳ ಸಹಿತ ಕಾಸರಗೋಡು ಜಿಲ್ಲೆಯೂ ಭೌಗೋಳಿಕವಾಗಿ ಏರು-ತಗ್ಗಿನಿಂದ ಕೂಡಿವೆ. ಇಲ್ಲಿನ ಹೆಚ್ಚಿನ ಕೃಷಿಕರ ಮನೆ, ಅಂಗಳ ಎತ್ತರದಲ್ಲಿದ್ದರೆ, ಕೃಷಿ ತೋಟವಿರುವುದು 30-40 ಅಡಿ ಆಳದಲ್ಲಿ! ಕೃಷಿಗಾಗಿ ಗೊಬ್ಬರ ಇತ್ಯಾದಿ ಮೇಲಿನಿಂದ ಕೆಳಕ್ಕೆ ಹೊರುವ ಕಷ್ಟ ಒಂದೆಡೆಯಾದರೆ, ಅಡಿಕೆ- ತೆಂಗು, ಬಾಳೆ ಇತ್ಯಾದಿ ಕೃಷಿ ಉತ್ಪನ್ನ ಕೆಳಗಿನ ತೋಟದಿಂದ ಮನೆ ಅಂಗಳಕ್ಕೆ ತರುವ, ಹೊರುವ ಕೆಲಸ ತ್ರಾಸದಾಯಕ. ಈ ಸಮಸ್ಯೆಗೆ ಪರಿಹಾರ ಕಾಣುವಲ್ಲಿ ಇಲ್ಲೊಬ್ಬ ರೈತ ಯಶಸ್ವಿಯಾಗಿದ್ದಾರೆ.
ಕಾಸರಗೋಡಿನ ಪೆರ್ಲ ಬಳಿ ಸಜಂಗದ್ದೆ ನಿವಾಸಿ ಪ್ರಗತಿಪರ ಕೃಷಿಕ ಶ್ರೀಹರಿ ಭಟ್ ರೋಪ್ ವೇ ಮೂಲಕ ಕೃಷಿ ಉತ್ಪನ್ನ, ಗೊಬ್ಬರ ಸಾಗಿಸುವ ಸಾಧನ ಪರಿಚಯಿಸಿದ್ದಾರೆ. ಮನೆಯಿಂದ ನೇರ ಕೃಷಿತೋಟಕ್ಕೆ, ಕೃಷಿತೋಟದಿಂದ ಮನೆಗೆ ಸಂಪರ್ಕ ಕಲ್ಪಿಸುವ ರೋಪ್ ವೇ ಶ್ರೀಹರಿ ಭಟ್ ಅಳವಡಿಸಿದ್ದು, 50 ಕಿಲೋಗಿಂತಲೂ ಅಧಿಕ ಭಾರದ ಸಾಮಗ್ರಿ ಈ ರೋಪ್ ವೇಯಿಂದ ಅನಾಯಾಸವಾಗಿ ಸಾಗಿಸಬಹುದು.
ಈ ವಿಧಾನದಲ್ಲಿ 2 ರಾಟೆ, ಕ್ಲಾಂಪ್ಸ್ ಬಳಸಲಾಗಿದೆ. ಜೊತೆಗೆ ಮನೆ ಅಂಗಳದಲ್ಲಿ 9 ಅಡಿ ಉದ್ದ, ಮೂರಡಿ ಮಣ್ಣಿನೊಳಗೆ ಇಳಿಸಿರುವ ಕಬ್ಬಿಣದ ಸಲಾಕೆ. ಇನ್ನೊಂದು 50 ಅಡಿ ತಗ್ಗಿನ ತೋಟದಲ್ಲಿ 7 ಅಡಿ ಉದ್ದ, ಮೂರಡಿ ಮಣ್ಣಿನೊಳಗೆ ಇಳಿಸಿರುವ ಸಲಾಕೆ. ಇವೆರಡರ ನಡುವೆ 8 MM ದಪ್ಪ ಕಬ್ಬಿಣದ ಕೇಬಲ್ ಎಳೆದು ಕಟ್ಟಿ, ಮೇಲೆ ಚಲಿಸುವ ರಾಟೆ ಇರಿಸಿದ್ದಾರೆ. ಅಂಗಳದ ಕಂಬದ ಬಳಿ ಸ್ಥಿರ ರಾಟೆ ಇರಿಸಿ ನೈಲಾನ್ ಹಗ್ಗ ಅಳವಡಿಸಲಾಗಿದೆ. ಸ್ಥಿರ ರಾಟೆಯಿಂದ ಕೇಬಲ್ ಮೇಲಿನ ರಾಟೆ ಎಳೆಯಲು ಸಂಪರ್ಕ ಕಲ್ಪಿಸಲಾಗಿದೆ. ಇದರ ಗರಿಷ್ಠ ಸಾಮರ್ಥ್ಯ 200 ಕಿಲೋ ಗೂ ಅಧಿಕವಿದ್ದು, 40-50 ಕಿಲೋ ಭಾರದ ಅಡಿಕೆ ಮೂಟೆ ನಿಮಿಷಾರ್ಧದಲ್ಲಿ ತೋಟದಿಂದ ಅಂಗಳಕ್ಕೆ ಬಂದು ಸೇರುತ್ತದೆ!
PublicNext
01/01/2022 11:16 am