ವರದಿ: ರಹೀಂ ಉಜಿರೆ
ಕಾರ್ಕಳ: ದೇಶದ ಯಾವುದೇ ಭಾಗದಲ್ಲಿ ದುರಂತ ನಡೆದರೂ ಆ ದುರಂತಕ್ಕೂ ಕರಾವಳಿಗೂ ನಂಟು ಇದ್ದೇ ಇರುತ್ತದೆ.ನಿನ್ನೆ ಸೇನಾ ಹೆಲಿಕಾಪ್ಟರ್ ದುರಂತಕ್ಕೆ ದೇಶಕ್ಕೆ ದೇಶವೇ ಮರುಗುತ್ತಿದೆ.ದುರಂತದಲ್ಲಿ ಮಡಿದ ಸೇನಾಧಿಕಾರಿಯೊಬ್ಬರು ಕಾರ್ಕಳದ ಅಳಿಯ ಎಂಬುದು ಗಮನಾರ್ಹ.ಹೀಗಾಗಿ ಸೇನಾಧಿಕಾರಿಯ ಕಾರ್ಕಳದ ಅತ್ತೆ ಮನೆಯೀಗ ಶೋಕದಲ್ಲಿ ಮುಳುಗಿದೆ..
ನಿನ್ನೆ ಸೇನೆ ಹೆಲಿಕಾಫ್ಟರ್ ಹೊತ್ತಿ ಉರಿಯುವಾಗ ಹದಿಮೂರು ಜನ ಸಾವನ್ನಪ್ಪಿದ್ದರು. ಈ ದುರ್ಘಟನೆಯಲ್ಲಿ ಉಡುಪಿ ಜಿಲ್ಲೆಯ ಅಳಿಯ ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್ ಕೂಡ ಇದ್ದರು.ಇವರು , ಸೇನೆಯಲ್ಲೇ ಸೇವೆ ಸಲ್ಲಿಸುತ್ತಿರುವ ಕಾರ್ಕಳದ ಪ್ರಫುಲ್ಲ ಅವರನ್ನು ಮದುವೆಯಾಗಿದ್ದರು. ಆಗಾಗ ಕಾರ್ಕಳಕ್ಕೆ ಬರುತ್ತಿದ್ದ ಕರ್ನಲ್ ದಂಪತಿಯನ್ನು ನೆನೆದು ಕಾರ್ಕಳ ಸಾಲ್ಮರದ ಮಿನೇಜಸ್ ಕುಟುಂಬ ಕಣ್ಣೀರಿಡುತ್ತಿದೆ. ನಿನ್ನೆ ದುರ್ಘಟನೆ ನಡೆದಾಗ ಈ ಕುಟುಂಬ ಟಿವಿ ನೋಡಿ ಶಾಕ್ ಗೆ ಒಳಗಾಗಿತ್ತು. ಮಧ್ಯಾಹ್ನ ಟಿವಿ ನೋಡುತ್ತಿದ್ದಾಗ ಮಾಹಿತಿ ತಿಳಿಯಿತು. ದೆಹಲಿಯಿಂದ ಫೋನ್ ಕರೆ ಬಂತು. ಬಹಳ ಬೇಸರವಾಗಿದೆ. ಬಹಳ ದುಃಖ ಆಗುತ್ತಿದೆ. ಹೆಚ್ಚೇನು ಮಾತನಾಡುವುದಿಲ್ಲ ಎಂದು ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್ ಪತ್ನಿಯ ಬಾವ ಪ್ರತಿಕ್ರಿಯೆ ನೀಡಿದ್ದಾರೆ.
ಬಾವ ಮತ್ತು ಪ್ರಫುಲ್ಲ ಬಹಳ ಅನ್ಯೋನ್ಯವಾಗಿ ಇದ್ದರು. ನಾಲ್ಕು ವರ್ಷದ ಹಿಂದೆ ಉಡುಪಿಗೆ ಬಂದಿದ್ದರು. ಕಾರ್ಕಳಕ್ಕೆ ಬರುವುದೆಂದರೆ ಇಬ್ಬರಿಗೂ ಬಹಳ ಖುಷಿಯ ವಿಷಯವಾಗಿತ್ತು. ಅವರು ಕುಟುಂಬದ ಜೊತೆ ಮತ್ತು ಸಹೋದ್ಯೋಗಿಗಳ ಜೊತೆ ತುಂಬ ಚೆನ್ನಾಗಿದ್ದರು.ಸಿಡಿಎಸ್ ಜ| ಬಿಪಿನ್ ರಾವತ್ ಅವರ ಸೆಕ್ರೆಟರಿಯಾಗಿ ಕೆಲಸ ಮಾಡುತ್ತಿದ್ದರು.ಹೀಗಾಗಿ ಅವರು ಹೋದಲ್ಲೆಲ್ಲಾ ಪ್ರಯಾಣ ಮಾಡಬೇಕಾಗುತ್ತಿತ್ತು.ನಿನ್ನೆಯ ಘಟನೆಯಿಂದ ಆಘಾತ ಆಗಿದೆ ಎಂದು ಸಿಂಗ್ ಪತ್ನಿಯ ಅಕ್ಕ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಏನು ಮಾತನಾಡಬೇಕು ಎಂದು ಗೊತ್ತಾಗುತ್ತಿಲ್ಲ. ಕುಟುಂಬ ಬಹಳ ಬೇಸರ ದಲ್ಲಿದೆ. ಅವರು ಬಹಳ ಉತ್ತಮ ಮನುಷ್ಯ. ಅವರು ಪಂಜಾಬ್ ರಾಜ್ಯದವರಾದರೂ ಕೂಡ ಈ ಊರಿಗೆ ಬಹಳ ಹೊಂದಿಕೊಂಡಿದ್ದರು. ಪ್ರಪುಲ್ಲ ಮತ್ತು ಅವರ ಮಗುವನ್ನು ನೆನೆಸಿಕೊಂಡರೆ ಬಹಳ ಬೇಸರವಾಗುತ್ತದೆ ಎಂದು ಊರವರು ಮರುಗುತ್ತಾರೆ.ಒಟ್ಟಾರೆ ನಿನ್ನೆಯ ದುರ್ಘಟನೆಯಿಂದ ಇಡೀ ಕಾರ್ಕಳ ಊರೇ ಶೋಕದಲ್ಲಿ ಮುಳುಗಿದೆ.
Kshetra Samachara
09/12/2021 04:56 pm