ವರದಿ: ಇರ್ಷಾದ್ ಕಿನ್ನಿಗೋಳಿ, ಪಬ್ಲಿಕ್ ನೆಕ್ಸ್ಟ್, ಮಂಗಳೂರು
ಮಂಗಳೂರು: ಪರ್ಸೀನ್ ಬೋಟ್ ದುರಂತ ನಡೆದ ಸಮಯದಲ್ಲಿ ಮೀನುಗಾರ ಯುವಕನೊಬ್ಬನ ಸಮಯಪ್ರಜ್ಞೆ 19 ಮಂದಿ ಸಹೋದ್ಯೋಗಿಗಳನ್ನು ರಕ್ಷಿಸಿದೆ. ಬೆಂಗರೆ ನಿವಾಸಿ ನಿಝಾಮ್ ಈ ರೀತಿ ಸಂಕಷ್ಟದ ಸಂದರ್ಭದಲ್ಲೂ ಸಮಯಪ್ರಜ್ಞೆ ಮೆರೆದ ಯುವಕ. ಡಿಂಗಿ(ಸಣ್ಣ ದೋಣಿ) ಸಹಾಯದಿಂದ ನಿಝಾಮ್ 19 ಮಂದಿ ಸಹೋದ್ಯೋಗಿಗಳನ್ನು ರಕ್ಷಿಸುವಲ್ಲಿ ಸಫಲರಾಗಿದ್ದಾರೆ. ಶ್ರೀರಕ್ಷಾ ಪರ್ಸೀನ್ ಬೋಟ್ ಮಗುಚಿ ಬೀಳುತ್ತಿದ್ದಂತೆಯೇ ಆ ಬೋಟ್ ನಲ್ಲಿದ್ದ 25 ಮಂದಿಯಲ್ಲಿ 19 ಮಂದಿ ನೀರಿಗೆ ಹಾರಿದ್ದಾರೆ. ಸಾಮಾನ್ಯವಾಗಿ ಈ ಡಿಂಗಿಯನ್ನು ಬೋಟ್ ಗೆ ಕಟ್ಟಲಾಗಿರುತ್ತದೆ. ಆದರೆ, ಆ ಸಮಯದಲ್ಲಿ ನಿಝಾಂ ತಕ್ಷಣವೇ ಮಗುಚಿ ಬೀಳುತ್ತಿದ್ದ ಬೋಟ್ ನಿಂದ ಹಗ್ಗ ತುಂಡರಿಸಿದ್ದಾರೆ. ಅಷ್ಟಾಗುತ್ತಲೇ 15 ಟನ್ ನಷ್ಟು ಮೀನು ತುಂಬಿದ್ದ 'ಶ್ರೀರಕ್ಷಾ' ಮಗುಚಿ ಸಮುದ್ರದ ಒಡಲು ಸೇರಿದೆ. ಇತ್ತ ಡಿಂಗಿ ಸೇರಿದ್ದವರಲ್ಲಿ ಎಷ್ಟು ಮಂದಿ ಇದ್ದಾರೆ ಅನ್ನೋ ಲೆಕ್ಕ ಅರಂಭಿಸಿದಾಗ ಆರು ಜನರು ಕಣ್ಮರೆಯಾಗಿರುವುದು ಗೊತ್ತಾಗಿದೆ.
ಆದರೆ, ಒಂದು ವೇಳೆ ಬೋಟ್ ಮಗುಚಿ ಬೀಳುತ್ತಿದ್ದ ಸಮಯದಲ್ಲಿ ನಿಝಾಮ್ ಹಗ್ಗ ತುಂಡರಿಸದೇ ಹೋಗಿದ್ದಲ್ಲಿ 25 ಮಂದಿಯೂ ಸಮುದ್ರಪಾಲಾಗೋದರಲ್ಲಿ ಸಂಶಯವಿರಲಿಲ್ಲ. 19 ಜನ ಏನಾದ್ರೂ ಬದುಕಿ ಉಳಿದಿದ್ದಾರೆ ಅಂದ್ರೆ ಅದರ ಹಿಂದೆ ನಿಝಾಮ್ ಸಮಯಪ್ರಜ್ಞೆ ಕೆಲಸ ಮಾಡಿದೆ. ಮಾಧ್ಯಮಗಳ ಮುಂದೆ ನಿಝಾಂ ಆ ಭೀಕರ ದುರಂತದ ಬಗ್ಗೆ ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ.
Kshetra Samachara
02/12/2020 03:29 pm