ಕುಂದಾಪುರ: ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ದಾಪುಗಾಲಿಟ್ಟಿದ್ದು ಸ್ವಚ್ಚತೆಯ ನಿಟ್ಟಿನಲ್ಲಿ ಮಹಿಳೆಯರು ಮತ್ತು ಮಕ್ಕಳ ಪಾತ್ರ ಮಹತ್ತರವಾಗಿದೆ. ಗಾಂಧೀಜಿಯವರು ಹೇಳಿದಂತೆ ಸ್ವಚ್ಚತೆಯಿರುವಲ್ಲಿ ದೇವರನ್ನು ಕಾಣಬಹುದು ಎಂಬ ಪರಿಕಲ್ಪನೆಯಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಂಡು ಗಾಂಧೀಜಿಯವರ ಆಶಯವನ್ನು ಸಾಕಾರಗೊಳಿಸೋಣ ಎಂದು ಉಡುಪಿಯ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಅವರು ಹೇಳಿದರು.
ತಾಲೂಕು ಪಂಚಾಯತ್ ಬೈಂದೂರು ಹಾಗೂ ಕುಂದಾಪುರ, ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಷ್ಟ್ರೀಯ ಗ್ರಾಮೀಣ ಜೋವನೋಪಾಯ ಅಭಿಯಾನ (ಎನ್.ಆರ್.ಎಲ್.ಎಂ), ಸಂಜೀವಿನಿ- ಉಡುಪಿ ಜಿಲ್ಲಾ ಅಭಿಯಾನ ನಿರ್ವಹಣಾ ಘಟಕ, ಸ್ವಚ್ವ ಭಾರತ್ ಮಿಷನ್ (ಗ್ರಾಮೀಣ), ಕೊಲ್ಲೂರು ಗ್ರಾಮಪಂಚಾಯತ್, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ, ತಾಲೂಕು ಮಟ್ಟದ ಸಂಜೀವಿನಿ ಒಕ್ಕೂಟ ಬೈಂದೂರು ಮತ್ತು ಕುಂದಾಪುರ, ಕೊಲ್ಲೂರು ಮಹಿಳಾ ಮಂಡಳ ಇವರ ಸಹಯೋಗದಲ್ಲಿ ಮಂಗಳವಾರ ಕೊಲ್ಲೂರು ಹಿರಿಯ ಪ್ರಾಥಮಿಕ ಶಾಲೆ ವಠಾರದಲ್ಲಿ ನಡೆದ ಬೃಹತ್ ಸಾಮಾಜಿಕ ಸೇರ್ಪಡೆ ಹಾಗೂ ಸ್ವಚ್ಚತಾ ಹೀ ಸೇವಾ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಪ್ರಭಾಕರ್ ಆಚಾರ್ ಮಾತನಾಡಿ, ಸಂಜೀವಿನಿ ಸಂಘದ ಮೂಲಕ ಕೇವಲ ಸಾಲ ಪಡೆಯುವುದು ಮಾತ್ರವಲ್ಲ. ಬದಲಾಗಿ ಸಾಮಾಜಿಕ, ಆರ್ಥಿಕ ಹಾಗೂ ಉದ್ಯಮ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೆ ತಲುಪಬೇಕೆಂಬುದು ಇದರ ಧ್ಯೇಯ. ಸಂಜೀವಿನಿ ಸಂಘದ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ತಯಾರಿಸಿದ ವಸ್ತುಗಳಿಗೆ ಅಗತ್ಯ ಮಾರುಕಟ್ಟೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು. ಕೊಲ್ಲೂರು ಗ್ರಾ.ಪಂ ಅಧ್ಯಕ್ಷ ಶಿವರಾಮಕೃಷ್ಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
Kshetra Samachara
27/09/2022 05:36 pm