ಉಡುಪಿ: ಪ್ರತಿಯೊಂದು ಕ್ಲಬ್, ಶಿಕ್ಷಕರಿಗೆ ಮತ್ತು ಪೋಷಕರಿಗೆ ಆಯಾ ಶಾಲೆಗಳಲ್ಲಿ ಕಾರ್ಯಾಗಾರವನ್ನು ಏರ್ಪಡಿಸಿ ಹತ್ತಿರದ ಶಾಲೆಗಳ ಎಲ್ಲಾ ಶಿಕ್ಷಕರನ್ನು ಮತ್ತು ಕಲಿಕಾ ನ್ಯೂನತೆಯುಳ್ಳ ಮಕ್ಕಳ ಪೋಷಕರನ್ನು ಒಂದು ಕಡೆ ಸೇರಿಸಿ ದೊಡ್ಡ ಮಟ್ಟದ ಕಾರ್ಯಾಗಾರವನ್ನು ಏರ್ಪಡಿಸಲಾಗುವುದು.
ಕಲಿಕಾ ನ್ಯೂನತೆ ಇದ್ದರೂ ಮುಂದೆ ವೃತ್ತಿ ಜೀವನದಲ್ಲಿ ಅಸಾಧಾರಣ ಸಾಧನೆ ಮಾಡಿದ (ಉದಾಹರಣೆ ಸಂಗೀತ, ನೃತ್ಯಕಲೆ, ಕ್ರೀಡೆ. ಕೃಷಿ, ಹೊಲಿಗೆ ಇತ್ಯಾದಿ) ವ್ಯಕ್ತಿಗಳನ್ನು ಕರೆಸಿ ಅವರ ಜೀವನ ಯಾತ್ರೆಯ ಕುರಿತು ಉಪನ್ಯಾಸವನ್ನು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಹಾಗೂ ಶಿಕ್ಷಕರಿಗೆ ಏರ್ಪಡಿಸಿ ಅವರಲ್ಲಿ ಮನೋಲ್ಲಾಸವನ್ನು ತುಂಬಿಸಲು ಪ್ರಯತ್ನಿಸಲಾಗುವುದು ಎಂದು ರೋಟರಿ ಅಂತರರಾಷ್ಟ್ರೀಯ ಜಿಲ್ಲೆ -3182 ರೋಟರಿ ಜಿಲ್ಲಾ ಗವರ್ನರ್ ಡಾ. ಜಯಗೌರಿ ಹಡಿಗಾಲ್ ಹೇಳಿದರು.
ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ದೇಶದಲ್ಲಿ ಲಕ್ಷಾಂತರ ಮಂದಿಗೆ ಚರ್ಮ, ಮೂತ್ರಪಿಂಡ, ಯಕೃತ್, ಹೃದಯ, ಪಿತ್ತ ಜನಕಾಂಗ, ಬಹು ಮುಖ್ಯ ಅಂಗಾಂಗಗಳ ತುರ್ತು ಅಗತ್ಯವಿದೆ. ಕೇವಲ 0.01% ಪ್ರಜೆಗಳು ಮಾತ್ರ ಇಂದು ಅಂಗಾಂಗ ದಾನ ಮಾಡುತ್ತಿದ್ದಾರೆ. ಈ ಅಂಗಾಂಗ ದಾನದ ಬಗ್ಗೆ ತಿಳಿವಳಿಕೆ ಮೂಡಿಸುವುದುಅನಿವಾರ್ಯವಾಗಿದೆ. ಒಬ್ಬ ಮೃತ ವ್ಯಕ್ತಿಯಿಂದ ಕನಿಷ್ಠ 8 ಜೀವಗಳನ್ನು ಉಳಿಸಬಹುದು. ಈ ನಿಟ್ಡಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಮಾಹಿತಿ ನೀಡಿದರು.
ಇನ್ನು ಸ್ತ್ರೀಯರ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳನ್ನು ಉನ್ನತೀಕರಿಸುವ ಉದ್ದೇಶದಿಂದ ಶಿಕ್ಷಣ, ಕೌಶಲಾಭಿವೃದ್ಧಿ ಮತ್ತು ಉದ್ಯೋಗ ಒದಗಿಸುವುದರ ಮೂಲಕ ಮಹಿಳೆಯರ ಸಾಮರ್ಥ್ಯವನ್ನು ಉತ್ತೇಜಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
Kshetra Samachara
27/08/2022 07:12 pm