ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮಕ್ಕಳ ಅಸ್ಥಿ ಮಜ್ಜೆಯ ಕಸಿ ಸೇವೆ: ನೊಂದ ರೋಗಿಗಳಿಗೆ ಭರವಸೆಯ ಆಶಾಕಿರಣ

ಮಣಿಪಾಲ: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಣಿಪಾಲದ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ ಭಾಗವಾಗಿರುವ ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗವು ಮಕ್ಕಳ ಅಸ್ಥಿಮಜ್ಜೆ ಕಸಿ ಸೌಲಭ್ಯದ ಯಶಸ್ಸನ್ನು ಆಚರಿಸುವ ಕಾರ್ಯಕ್ರಮ ಮತ್ತು ಪತ್ರಿಕಾಗೋಷ್ಠಿಯನ್ನು ಆಯೋಜಿಸಿತ್ತು.

ಈ ಸಂದರ್ಭದಲ್ಲಿ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ.ಶರತ್ ಕುಮಾರ್ ರಾವ್ ಅವರು ಮಕ್ಕಳ ಅಸ್ಥಿಮಜ್ಜೆ ಕಸಿ ಕ್ಲಿನಿಕ್ ನ ಮಾಹಿತಿ ಕರಪತ್ರಗಳನ್ನು ಬಿಡುಗಡೆ ಮಾಡಿ ಮಾತನಾಡಿ, " ಅಸ್ಥಿಮಜ್ಜೆ ಕಸಿ ವಿವಿಧ ಬಗೆಯ ಕ್ಯಾನ್ಸರ್ ಮತ್ತು ರಕ್ತ ಸಂಬಂಧಿ ಅಸ್ವಸ್ಥತೆಗಳಿಗೆ ಜೀವರಕ್ಷಕ ವಿಧಾನವಾಗಿದೆ". “ಇಂತಹ ಸಂಕೀರ್ಣ ವೈದ್ಯಕೀಯ ಚಿಕಿತ್ಸೆಯನ್ನು ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಬೆಂಗಳೂರುಗಳಲ್ಲಿ ಮಾತ್ರ ನಡೆಸಲಾಗುತಿತ್ತು. ಈಗ ಕರಾವಳಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಮಣಿಪಾಲವು ಮಕ್ಕಳಿಗಾಗಿ ಈ ಸುಸಜ್ಜಿತ ಸೇವೆಗಳನ್ನು ಪ್ರಾರಂಭಿಸಿದೆ" ಎಂದು ಹೇಳಿದರು.

ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ್ ಶೆಟ್ಟಿ ಅವರು "ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅಸ್ಥಿಮಜ್ಜೆ ಕಸಿ ಯಶಸ್ವಿಯಾಗಿ ನಡೆಸಲು ಅಗತ್ಯವಿರುವ ಎಲ್ಲಾ ಸೌಲಭ್ಯಗಳು ಲಭ್ಯವಿರುವುದರಿಂದ , ಇಂತಹ ಚಿಕಿತ್ಸೆ ಅವಶ್ಯವಿರುವ ಮಕ್ಕಳು ಈ ಪ್ರಕ್ರಿಯೆಗೆ ಹೆಚ್ಚು ದೂರ ಪ್ರಯಾಣಿಸುವ ಅಗತ್ಯವಿಲ್ಲ” ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರತಿಕಾ ವರದಿಗಾರರಿಗೆ ಮಣಿಪಾಲ ಆರೋಗ್ಯ ಕಾರ್ಡ್ ಅನ್ನು ಅವರು ವಿತರಿಸಿದರು.ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ ಸಂಯೋಜಕರಾದ ಡಾ. ನವೀನ್ ಸಲಿನ್ಸ್,ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಅರ್ಚನಾ ಎಂ.ವಿ, ಉಪಸ್ಥಿತರಿದ್ದರು. ಮಾರುಕಟ್ಟೆ ವಿಭಾಗದ ಕೃಷ್ಣ ಪ್ರಸಾದ್ ಅವರು ಕಾರ್ಯಕ್ರಮ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

04/08/2022 12:17 pm

Cinque Terre

2.64 K

Cinque Terre

0