ಉಡುಪಿ: ರಸ್ತೆಯಲ್ಲಿ ಓಡಾಡುತ್ತ ಮನೆ ಇಲ್ಲದೆ ಇರುವ ವ್ಯಕ್ತಿಗಳ ಪೈಕಿ 30% ಜನ ಮನೋ ರೋಗಗಳಿಂದ ಬಳಲುತ್ತಾ ಇರುತ್ತಾರೆ. ಇದರಲ್ಲಿ ಇಚ್ಛಿತ ಚಿತ್ತವಿಕಲತೆ ತೀವ್ರ ಬೈಪೋಲಾರ್ ಅಸ್ವಸ್ಥತೆ, ತೀವ್ರ ಗೀಳು ರೋಗ, ತೀವ್ರ ಖಿನ್ನತೆ, ತಲೆಗೆ ಪೆಟ್ಟು ಬಿದ್ದು ಉಂಟಾದ ಆರ್ಗಾನಿಕ್ ಬ್ರೈನ್ ಸಿಂಡ್ರೋಮ್ ಮುಂತಾದ ಕಾರಣಗಳಿಂದ ಹಲವಾರು ಜನ ಮನೆಬಿಟ್ಟು ನೂರರಿಂದ ಸಾವಿರಾರು ಕಿಲೋಮೀಟರ್ ನಡೆದು ಅಥವಾ ಟಿಕೆಟಿಲ್ಲದ ಪ್ರಯಾಣ ಮಾಡುವುದು ಸಹಜವಾಗಿದೆ. ಕಾಯಿಲೆಯಿಂದ ಅವರು ರಸ್ತೆಯಲ್ಲಿ ಒಬ್ಬರೇ ಓಡಾಡುವುದು ಹಾಗು ವೈಯಕ್ತಿಕ ಸ್ವಚ್ಛತೆಯಿಲ್ಲದ ಇರುವುದು ಕಂಡುಬರುತ್ತದೆ.ಇಂಥವರ ಯೋಗಕ್ಷೇಮ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ.ಆದರೆ ವಿವಿಧ ಇಲಾಖೆಗಳು ಇಂತಹ ವ್ಯಕ್ತಿಗಳನ್ನು ನಿರ್ಲಕ್ಷಿಸುತ್ತಿವೆ ಎಂದು ಖ್ಯಾತ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ,ಮಾನಸಿಕ ಅರೋಗ್ಯ ಯೋಗಕ್ಷೇಮ ಕಾಯ್ದೆ 2017 ಜಾರಿಯಾಗಿ ಐದು ವರ್ಷಗಳಾಗಿವೆ. ಆದರೆ ನಮ್ಮ ಸರಕಾರಿ ಇಲಾಖೆಗಳು ಇನ್ನೂ ನಿದ್ರೆಯಲ್ಲೇ ಇವೆ. ಈ ಕಾಯ್ದೆಗಳ ಅನ್ವಯ ಇಂತಹ ವ್ಯಕ್ತಿಗಳನ್ನು ಅಂದರೆ ಸಂಭಾವಿತ ಮಾನಸಿಕ ಅಸ್ವಸ್ಥರಿಗೆ ಚಿಕಿತ್ಸೆಗೆ ನೀಡುವುದು ಪೊಲೀಸರು ತುರ್ತಾಗಿ ಮಾಡಬೇಕಾದ ಕೆಲಸ, ಹಾಗೆಯೇ ಅಂತಹ ಕಾಯಿಲೆ, ದೃಢಪಟ್ಟಲ್ಲಿ ಅವರನ್ನು ಇದೇ ಕಾಯ್ದೆಯನ್ವಯ ಮನೋಚಿಕಿತ್ಸೆ ಕೊಡಿಸಲು ಸರ್ಕಾರ ಕಾರ್ಯಪ್ಪವೃತ್ತ ಆಗಬೇಕು.ಸರ್ಕಾರಿ ಆಸ್ಪತ್ರೆ ಅಥವಾ ಅಲ್ಲಿ ಚಿಕಿತ್ಸಾ ಸೌಲಭ್ಯ ಲಭ್ಯವಿಲ್ಲದೆ ಇದ್ದಲ್ಲಿ ಖಾಸಗಿ ನಾಮನಿರ್ದೇಶಿತ ಆಸ್ಪತ್ರೆಗಳಲ್ಲಿ ಸರ್ಕಾರ ಚಿಕಿತ್ಸಾ ವೆಚ್ಚ ಭರಿಸಿ ಚಿಕಿತ್ಸೆ ಕೂಡಿಸಬೇಕು. ಈ ಚಿಕಿತ್ಸಾ ಸಮಯದಲ್ಲಿ ಈ ಕಾಯಿಲೆ ಇರುವವರ ಯೋಗಕ್ಷೇಮ ನೋಡಿಕೊಳ್ಳಲು ಹಾಗು ಅವರ ಬಗ್ಗೆ ನಿರ್ಧಾರ ಕೈಗೊಳ್ಳಲು Nominated Representative ಈ ಕೆಲಸ ನಿರ್ವಹಿಸಬೇಕು.ಗುಣಮುಖರಾದ ರೋಗಿಗಳನ್ನು ಅವರ ಮನೆ ಇಲ್ಲದೆ ಇದ್ದಲ್ಲಿ ಪುನರ್ವಸತಿ ಕೇಂದ್ರಗಳಿಗೆ ಇವರನ್ನು ಕಳಿಸಬೇಕು. ಗುಣಮುಖರಾದ ಮಹಿಳೆಯರನ್ನು ಮತ್ತು ಮಕ್ಕಳನ್ನು ಸರ್ಕಾರಿ ಸ್ಟೇಟ್ ಹೋಂ ನಲ್ಲಿ ಇಡಬೇಕು.
ಗುಣಮುಖರಾದ ರೋಗಿಗಳನ್ನು ಕುಟುಂಬದೊಂದಿಗೆ ಸೇರಿಸುವುದು ಪೊಲೀಸರ ಕರ್ತವ್ಯ. ಇಂತಹ ಯಾವುದೇ ವ್ಯವಸ್ಥೆ ನಮ್ಮ ಜಿಲ್ಲೆಯಲ್ಲಿ ಸರಿಯಾಗಿ ನಡೆಯುತ್ತಾ ಇಲ್ಲ. ಹಲವಾರು ಬಾರಿ ಸರ್ಕಾರದ ಪರವಾಗಿ ಸರ್ಕಾರಿ ಅಧಿಕಾರಿಗಳು ಮಾನಸಿಕ ರೋಗಿಗಳನ್ನು ತಂದು ಆಸ್ಪತ್ರೆಯಲ್ಲಿ ಸೇರಿಸಿ ಅವರು ಗುಣಮುಖರಾದ ಮೇಲೆ ಅವರಿಗೆ ಸರಿಯಾದ ವ್ಯವಸ್ಥೆ ಕಲ್ಪಿಸದೆ ಜಾರಿಕೊಳ್ಳುವುದು, ಇಲ್ಲವೇ ಕೆಲವೊಮ್ಮೆ ಎಲ್ಲಿಯೋ ಯಾವುದೇ ಸರ್ಕಾರಿ ಮಾನ್ಯತೆ ಇಲ್ಲದ ಸ್ಥಳಗಳಲ್ಲಿ ಅವರನ್ನು ಸೇರಿಸುವುದು ಹಾಗು ಅಲ್ಲಿ ಅವರಿಗೆ ಯಾವುದೇ
ಸೌಕರ್ಯಗಳು ಇಲ್ಲದೆ ಇದ್ದರೂ ಸರ್ಕಾರ ಕಣ್ಣುಮುಚ್ಚಿ ಕುಳಿತುಕೊಂಡಿದೆ.ಸರಕಾರದ ವಿವಿಧ ಯೋಜನೆಗಳು ಉಳ್ಳವರಿಗೆ ತಲುಪುತ್ತಿವೆ.ಆದರೆ ಮಾನಸಿಕ ಅಸ್ವಸ್ಥರು ಮತ್ತು ನಿರ್ಗತಿಕರು ಕೂಡ ನಮ್ಮಂತೆ ಬದುಕುವ ಹಕ್ಕನ್ಬು ಹೊಂದಿದ್ದಾರೆ.ಸರಕಾರ ತಕ್ಷಣ ಇಂಥವರ ಚಿಕಿತ್ಸೆ ಮತ್ತು ಯೋಗಕ್ಷೇಮಕ್ಕೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.ಪತ್ರಿಕಾಗೋಷ್ಠಿ ಯಲ್ಲಿ ,ಸಮಾಜಸೇವಕ ವಿಶು ಶೆಟ್ಟಿ ಕೂಡ ಸರಕಾರದ ನಿರ್ಲಕ್ಷ್ಯದ ಬಗ್ಗೆ ಅಸಾಮಾಧಾನ ಹೊರಹಾಕಿದರು.
Kshetra Samachara
16/06/2022 02:27 pm