ವಿಶೇಷ ವರದಿ: ರಹೀಂ ಉಜಿರೆ
ಕುಂದಾಪುರ/ಬೈಂದೂರು: ಜಿಲ್ಲೆಯ ಅತ್ಯಂತ ಹಿಂದುಳಿದ ಕ್ಷೇತ್ರವಾದ ಬೈಂದೂರಿನಲ್ಲಿ ಡೆಂಘಿ ರೋಗ ಮಿತಿಮೀರಿದೆ. ತಾಲೂಕಿನ ಜಡ್ಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುದೂರು, ಉದಯನಗರ, ಬೀಸಿನಪಾರೆ, ಕಾನ್ಕಿ ಮುಂತಾದೆಡೆ ಹಲವರಲ್ಲಿ ಡೆಂಘಿ ಕಾಣಿಸಿಕೊಂಡಿದೆ. ಈ ಭಾಗದಲ್ಲಿ ಜನವರಿಯಿಂದ ಈವರೆಗೆ 90ಕ್ಕೂ ಹೆಚ್ಚು ಜನರಲ್ಲಿ ಡೆಂಘಿ ಜ್ವರ ಪತ್ತೆಯಾಗಿದ್ದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.
ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಬರುವ ಈ ಪ್ರದೇಶ ಬಹುತೇಕ ಕಾಡು ಗುಡ್ಡ ಬೆಟ್ಟಗಳಿಂದ ಕೂಡಿದೆ. ಬಹುತೇಕ ಕಾಡುತ್ಪತ್ತಿ, ಕೃಷಿ, ಅಡಿಕೆ, ರಬ್ಬರ್, ಬಾಳೆ, ಗೇರು ಕೃಷಿಯನ್ನೆ ನಂಬಿಕೊಂಡಿರುವ ಈ ಭಾಗದ ಜನತೆ ಸದ್ಯ ಡೆಂಘ್ಯೂನಿಂದ ಕಂಗಾಲಾಗಿದ್ದಾರೆ. ಕಳೆದ 2 ತಿಂಗಳಿನಿಂದೀಚೆಗೆ ಜಡ್ಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಏಕಾಏಕಿ ಡೆಂಘಿ ರೋಗ ಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು, ಪಂಚಾಯತ್, ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರು ಸೇರಿ ಕಾರ್ಯಪ್ರವೃತ್ತಗೊಂಡಿದ್ದರೂ ರೋಗ ಲಕ್ಷಣ ಉಲ್ಬಣಗೊಳ್ಳುತ್ತಿರುವುದು ಇಲಾಖೆಗೆ ಸವಾಲಾಗಿದೆ. ದಿನೇ ದಿನೇ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದು ಗ್ರಾಮಸ್ಥರಲ್ಲಿ ಮತ್ತೆ ಆತಂಕ ಮೂಡಿಸಿದೆ.
ಸದ್ಯ ಜಡ್ಕಲ್ ಗ್ರಾ.ಪಂ., ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರು ಸಹಿತ ಗ್ರಾಮಸ್ಥರ ಸಹಕಾರದೊಡನೆ ಪ್ರತ್ಯೇಕ 9 ತಂಡ ರಚಿಸಿ ರೋಗ ಹೊಗಲಾಡಿಸುವ ಯತ್ನದಲ್ಲಿ ತೊಡಗಿದೆ. ತಂಡ ತಂಡವಾಗಿ ಗ್ರಾಮಗಳ ವಿವಿಧೆಡೆಗೆ ತೆರಳಿ ಅಲ್ಲಿನ ನಿವಾಸಿಗಳಿಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುತ್ತಿದೆ.
ಒಟ್ಟಾರೆ ಕಳೆದ ಕೆಲವು ತಿಂಗಳುಗಳಿಂದ ಈ ಭಾಗದಲ್ಲಿ ಕೊರೊನಾ ಭಯದಿಂದ ಇದ್ದ ಜನತೆ ಈಗ ಡೆಂಘಿ ರೋಗದಿಂದ ಹೈರಾಣಾಗಿದ್ದಾರೆ.ಸಂಬಂಧಪಟ್ಟ ಇಲಾಖೆ ರೋಗ ಹರಡದಂತೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ.
Kshetra Samachara
18/05/2022 06:59 pm