ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆಯು ಮೂತ್ರಪಿಂಡದ ವೈಫಲ್ಯವನ್ನು ಹೊಂದಿದ್ದ ಮತ್ತು ಕಳೆದ ಆರು ತಿಂಗಳಿಂದ ಹಿಮೋಡಯಾಲಿಸಿಸ್ ನಲ್ಲಿರುವ ಮಗುವಿಗೆ ಮೊಟ್ಟ ಮೊದಲ ಬಾರಿಗೆ ರಕ್ತದ ಗುಂಪು ಎಬಿಒ - ಹೊಂದಾಣಿಕೆಯಾಗದ ಮೂತ್ರಪಿಂಡವನ್ನು ಯಶಸ್ವಿಯಾಗಿ ಕಸಿ ಮಾಡಿತು.
ಶಿವಮೊಗ್ಗದ14 ವರ್ಷದ ಬಾಲಕನಿಗೆ 3 ವರ್ಷಗಳ ಹಿಂದೆ ಕಿಡ್ನಿ ವೈಫಲ್ಯವಾಗಿರುವುದು ಪತ್ತೆಯಾಗಿತ್ತು. ಇದರ ಪರಿಣಾಮವಾಗಿ ಬಾಲಕನ ದೈಹಿಕ ಬೆಳವಣಿಗೆ ಮತ್ತು ಚಟುವಟಿಕೆ ಕಡಿಮೆಯಾಯಿತು. ಹೆಚ್ಚಿನ ಆರೈಕೆಗಾಗಿ ಮಗುವನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳ ಮೂತ್ರಪಿಂಡ ವಿಭಾಗಕ್ಕೆ ಶಿಫಾರಸು ಮಾಡಲಾಯಿತು. ಮಗುವನ್ನು ಮೌಲ್ಯಮಾಪನ ಮಾಡಿದ ನಂತರ, ಲಭ್ಯವಿರುವ ಚಿಕಿತ್ಸಾ ಆಯ್ಕೆಗಳ ಬಗ್ಗೆ ಕುಟುಂಬಕ್ಕೆ ಸಲಹೆ ನೀಡಲಾಯಿತು. ಕುಟುಂಬವು ಸಂಭಾವ್ಯ ಮೂತ್ರಪಿಂಡ ದಾನಿ ಮತ್ತು ರಕ್ತದ ಹೊಂದಾಣಿಕೆಯ ಗುಂಪಿನಂತೆ ತಂದೆಯ ಮೂತ್ರಪಿಂಡ ಕಸಿ ಮಾಡುವಿಕೆಯನ್ನು ಆಯ್ಕೆ ಮಾಡಿಕೊಂಡಿತು.
ಆದಾರೆ, ಮೌಲ್ಯಮಾಪನದಲ್ಲಿ ತಂದೆಗೆ ಮಧುಮೇಹ ಇರುವುದು ಪತ್ತೆಯಾಯಿತು ಮತ್ತು ಕಿಡ್ನಿ ದಾನಿಯಾಗಿ ಸ್ವೀಕರಿಸಲು ಸಾಧ್ಯವಾಗಲಿಲ್ಲ. ಬಿ ಪಾಸಿಟಿವ್ ರಕ್ತದ ಗುಂಪು ಹೊಂದಿದ್ದ ತಾಯಿ ಮೂತ್ರಪಿಂಡ ದಾನಕ್ಕೆ ಮುಂದೆ ಬಂದರು. ಆದ್ದರಿಂದ ಎ ಬಿ ಒ -ಹೊಂದಾಣಿಕೆಯಿಲ್ಲದ ಕಸಿಗೆ ಆಯ್ಕೆ ಮಾಡಿಕೊಳ್ಳಲಾಯಿತು. ಅಂತಹ ಕಸಿಗೆ ಪ್ಲಾಸ್ಮಾಫೆರೆಸಿಸ್ ಮೂಲಕ ಮಗುವಿನ ರಕ್ತದಿಂದ ಪೂರ್ವನಿರ್ಧರಿತ ಪ್ರತಿಕಾಯಗಳನ್ನು ತೆಗೆದುಹಾಕುವುದು ಮತ್ತು ಕಸಿ ಮಾಡುವ ಮೊದಲು ಹೆಚ್ಚುವರಿ ಇಮ್ಯುನೊಸಪ್ರೆಶನ್ ಔಷಧಿಗಳ ಬಳಕೆ ಅಗತ್ಯವಿರುತ್ತದೆ.
ಅಗತ್ಯ ನೀತಿ ನಿಯಮಗಳನ್ನು ಪೂರ್ಣಗೊಳಿಸಿದ ನಂತರ, ಮಗುವಿಗೆ ಮೂತ್ರಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಅರುಣ್ ಚಾವ್ಲಾ ಮತ್ತು ಅವರ ತಂಡ ಹಾಗೂ ಟ್ರಾನ್ಸ್ಫ್ಯೂಷನ್ ಮೆಡಿಸಿನ್ ವಿಭಾಗದ ಮುಖ್ಯಸ್ಥರಾದ ಡಾ. ಶಮೀ ಶಾಸ್ತ್ರಿ ಮತ್ತು ಅವರ ತಂಡದ ಸಹಕಾರದೊಂದಿಗೆ ಎ ಬಿ ಒ -ಹೊಂದಾಣಿಕೆಯಿಲ್ಲದ ಮೂತ್ರಪಿಂಡ ಕಸಿ ಮಾಡಲಾಯಿತು. ನಂತರ 10ನೇ ದಿನದಂದು ಕಿಡ್ನಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರಿಂದ ಮಗುವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
Kshetra Samachara
03/02/2022 08:29 pm