ಮಂಗಳೂರು: ವೈದ್ಯರೆಂದರೆ ಸಾಕ್ಷಾತ್ ನಾರಾಯಣನ ಅಪರಾವತಾರ ಎಂದು 'ವೈದ್ಯೋನಾರಾಯಣೋ ಹರಿಃ' ಎಂಬ ವಾಕ್ಯ ಸಾರಿ ಹೇಳುತ್ತದೆ. ನಿಜ ಜೀವನದಲ್ಲೂ ರೋಗಿಯನ್ನು ಸಾವಿನ ದವಡೆಯಿಂದ ಪಾರುಮಾಡಿ ಜೀವ ಉಳಿಸುವ ವೈದ್ಯರನ್ನು ದೇವರಂತೆ ಕಾಣುವವರು ಎಷ್ಟೋ ಮಂದಿಯಿದ್ದಾರೆ. ಅವರಲ್ಲಿ ಆ ರೀತಿಯ ಧನ್ಯತಾ ಭಾವವಿರುತ್ತದೆ ಎಂದರೆ ಅತಿಶಯೋಕ್ತಿಯಲ್ಲ. ಅಂಥಹದ್ದೇ ಒಂದು ಘಟನೆ ಮಂಗಳೂರಿನಲ್ಲಿ ನಡೆದಿದೆ. ಸ್ವತಃ ವೈದ್ಯರೇ ಘಟನೆಯ ಬಗ್ಗೆ ವಿವರಿಸಿ ಫೋಟೋ ಸಹಿತ ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಇಂಟರ್ವೆನ್ಷನಲ್ ಕಾರ್ಡಿಯೊಲಜಿಸ್ಟ್ ಆಗಿರುವ ಡಾ.ಪದ್ಮನಾಭ ಕಾಮತ್ ತಮ್ಮಿಂದ ಚಿಕಿತ್ಸೆ ಪಡೆದ ಹೃದ್ರೋಗಿಯೋರ್ವನು ಧನ್ಯತಾ ಭಾವದಿಂದ ಕೃತಜ್ಞತೆ ಸಲ್ಲಿಸಿರುವ ಪರಿಯನ್ನು ಫೋಟೋ ಸಹಿತ ಹಂಚಿಕೊಂಡಿದ್ದಾರೆ. ಮೂರು ವಾರಗಳ ಹಿಂದೆ ಹೃದ್ರೋಗಿಯೋರ್ವನು ತಮ್ಮಿಂದ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದ. ಆತ ಸಂಪೂರ್ಣ ಗುಣಮುಖನಾದ ಬಳಿಕ ತಮ್ಮೊಂದಿಗೆ ನಡೆದುಕೊಂಡ ರೀತಿಗೆ ತಾನು ಮನಸೋತಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.
ಹೃದ್ರೋಗದಿಂದ ಬಳಲುತ್ತಿದ್ದಾತನಿಗೆ ನಮ್ಮ ಆಸ್ಪತ್ರೆಯಲ್ಲಿ ಆ್ಯಂಜಿಯೋಪ್ಲಾಸ್ಟಿ ಮಾಡಿ ಚಿಕಿತ್ಸೆ ನೀಡಿದ್ದೆವು. ಜೀವ ಉಳಿಸಿದ ನಮಗೆ ಆತನು ದೇವರ ಪ್ರಸಾದವನ್ನು ತಂದುಕೊಟ್ಟದ್ದಲ್ಲದೆ, ಸಾಷ್ಟಾಂಗ ನಮಸ್ಕಾರ ಮಾಡಲು ಬಂದಿದ್ದಾರೆ. ಇಂಥದ್ದೊಂದು ಕೃತಜ್ಞತೆಯು ವ್ಯಕ್ತವಾಗಿರುವುದಕ್ಕೆ ಪ್ರತಿಯಾಗಿ ನಾನು ನನ್ನೆಲ್ಲ ರೋಗಿಗಳಿಗೆ ಶಿರಬಾಗುತ್ತೇನೆ. ಈ ರೀತಿಯ ಕೃತಜ್ಞತೆ ನಮ್ಮ ಶ್ರೇಷ್ಠ ಭಾರತೀಯ ಸಂಸ್ಕೃತಿ ಎಂದು ಡಾ.ಪದ್ಮನಾಭ ಕಾಮತ್ ಬರೆದುಕೊಂಡಿದ್ದಾರೆ.
Kshetra Samachara
22/12/2021 11:37 am