ಕೋಟ: ಬ್ರಹ್ಮಾವರ ತಾಲೂಕಿನ ಸಾಹೇಬ್ರಕಟ್ಟೆ ಕಾಜ್ರಲ್ಲಿ ಕಾಲೊನಿ ನಿವಾಸಿ ಒಂದೇ ಕುಟುಂಬದ 7 ಮಂದಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದ್ದು, ಉಡುಪಿ ಡಿ.ಸಿ. ಕೂರ್ಮಾ ರಾವ್ ಶನಿವಾರ ಮನೆಗೇ ಭೇಟಿ ನೀಡಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊರೊನಾ ಆರಂಭದಲ್ಲಿ ಕುಟುಂಬದ ಸದಸ್ಯನೋರ್ವ ಸಾವನ್ನಪ್ಪಿದಾಗ ಆಡಳಿತ ವ್ಯವಸ್ಥೆ ಹಾಗೂ ಊರಿನವರು ತಿರಸ್ಕಾರದ ಮನೋಭಾವ ತೋರಿಸಿದ್ದಾರೆ ಎಂದು ಕುಟುಂಬ ಸದಸ್ಯರು ಬೇಸರಿಸಿದ್ದರು, ದುಃಖಿತರಾಗಿದ್ದರು.
ಆದ್ದರಿಂದ, ಆಶಾ ಕಾರ್ಯಕರ್ತೆಯರು, ವೈದ್ಯರು, ಸ್ಥಳೀಯ ಜನಪ್ರತಿನಿಧಿಗಳು ಎಷ್ಟು ಪ್ರಯತ್ನಿಸಿದರೂ ಲಸಿಕೆ ಹಾಕಿಸಿಕೊಳ್ಳಲು ಒಪ್ಪಿಗೆ ನೀಡಿರಲಿಲ್ಲ. ಶನಿವಾರ ಸಾಹೇಬ್ರಕಟ್ಟೆ ಆರೋಗ್ಯ ಕೇಂದ್ರಕ್ಕೆ ಆಗಮಿಸಿದ್ದ ಡಿ.ಸಿ. ಈ ಬಗ್ಗೆ ತಿಳಿದು ನೇರವಾಗಿ ಮನೆಗೇ ಭೇಟಿ ನೀಡಿದ್ದಾರೆ.
ಮನೆಯವರ ಸಮಸ್ಯೆ- ನೋವು ಆಲಿಸಿದ ಜಿಲ್ಲಾಧಿಕಾರಿ, ಸಮಾಧಾನಿಸಿ, ಹಂತ-ಹಂತವಾಗಿ ಸಮಸ್ಯೆ ಪರಿಹರಿಸಲಾಗುವುದು. ದಯವಿಟ್ಟು ಲಸಿಕೆ ಪಡೆಯಿರಿ ಎಂದು ವಿನಂತಿಸಿದ್ದಾರೆ. ಬಳಿಕ ಮನೆಯವರು ಲಸಿಕೆ ಪಡೆಯುವುದಾಗಿ ಭರವಸೆ ನೀಡಿದ್ದಾರೆ.
ಆಡಳಿತ ವ್ಯವಸ್ಥೆ ಬಗ್ಗೆ ಬೇಸರಗೊಂಡು ಕಳೆದ 3 ತಿಂಗಳಿನಿಂದಲೂ ಈ ಕುಟುಂಬ ಪಡಿತರ ಸಾಮಗ್ರಿ ಕೂಡ ಪಡೆಯುತ್ತಿಲ್ಲ ಎಂಬುದು ಈ ಸಂದರ್ಭ ತಿಳಿದು ಬಂತು. ಆಗ ತಕ್ಷಣ ಪಡಿತರಕ್ಕೆ ವ್ಯವಸ್ಥೆ ಮಾಡುವಂತೆ ಗ್ರಾಮ ಲೆಕ್ಕಾಧಿಕಾರಿಗೆ ಡಿ.ಸಿ. ಆದೇಶಿಸಿದರು.
ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ ಮೂರ್ತಿ, ಕೋಟ ಆರ್‌ಐ ರಾಜು, ಬ್ರಹ್ಮಾವರ ಆರ್ ಐ ಲಕ್ಷ್ಮೀನಾರಾಯಣ ಭಟ್, ವಿಎ ಶರತ್ ಶೆಟ್ಟಿ, ಗ್ರಾಪಂ ಸದಸ್ಯ ಪ್ರದೀಪ್ ಬಲ್ಲಾಳ್, ವೈದ್ಯಾಧಿಕಾರಿ ಡಾ.ಜಯಶೀಲ ಆಚಾರ್ ಉಪಸ್ಥಿತರಿದ್ದರು.
Kshetra Samachara
21/11/2021 04:59 pm