ಮುಲ್ಕಿ: ಮುಲ್ಕಿ ವಿಜಯಾ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಮುಲ್ಕಿ ರೋಟರಿ ಕ್ಲಬ್ ಜಂಟಿ ಆಶ್ರಯದಲ್ಲಿ ಆಜಾದ್ ಕ ಅಮೃತ್ ಮಹೋತ್ಸವ್ ಅಂಗವಾಗಿ "ಸ್ವಚ್ಛತಾ ಜಾಗೃತಿ ಅಭಿಯಾನ ಮತ್ತು ಸ್ವಚ್ಛತಾ ಪರಿಕರ ವಿತರಣಾ ಸಮಾರಂಭ" ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ ಶ್ರೀಮಣಿ ಶೆಟ್ಟಿ ಮಾತನಾಡಿ , ಸ್ವಚ್ಛತೆ ಮಾತಿಗೆ ಸೀಮಿತವಾಗದೆ, ಪ್ರತಿಯೊಬ್ಬರ ಜೀವನದ ಭಾಗವಾಗಬೇಕು. ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸ್ವಚ್ಛ ಭಾರತ ಅಭಿಯಾನ ಯಶಸ್ವಿಯಾಗಿ ಸಾಗುತ್ತಿದೆ ಹಾಗೂ ಯುವಜನತೆ ಸ್ವಚ್ಛತೆಯ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ರೋಟರಿ ಕ್ಲಬ್ ನಂತಹ ಸಂಘ ಸಂಸ್ಥೆ ಜೊತೆಗೆ ಸಮನ್ವಯತೆ ಸಾಧಿಸಿ ಇತರರಿಗೂ ಪ್ರೇರಣೆಯಾದರೆ, ಕ್ಲೀನ್ ಇಂಡಿಯಾ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದರು.
ಈ ಸಂದರ್ಭ ಮುಲ್ಕಿ ರೋಟರಿ ಕ್ಲಬ್ ವತಿಯಿಂದ ಕಾಲೇಜಿಗೆ ಬೇಕಾದ ಸ್ವಚ್ಛತಾ ಪರಿಕರವನ್ನು ಅಧ್ಯಕ್ಷರಾದ ಶಿವರಾಮ್ ಜಿ ಅಮೀನ್ ನೇತೃತ್ವದಲ್ಲಿ ನೀಡಲಾಯಿತು ಹಾಗೂ ಕಾಲೇಜಿನ ವತಿಯಿಂದ ಸ್ವಚ್ಛತಾ ಜಾಗೃತಿ ಬಗ್ಗೆ ಭಿತ್ತಿ ಫಲಕವನ್ನು ಕಾಲೇಜಿನ ಆವರಣದಲ್ಲಿ ಹಾಕಿ ಸ್ಥಳೀಯ ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲೆ ವಿಭಾಗ) ಕಾರ್ನಾಡು ಹಾಗೂ ಪಂಜಿನಡ್ಕ ಕೆ ಪಿ ಎಸ್ ಕೆ ಪ್ರೌಢಶಾಲೆಗೆ ಕೊಡುಗೆಯಾಗಿ ನೀಡಲಾಯಿತು.
ಸಮಾರಂಭದಲ್ಲಿ ಕಾಲೇಜಿನ ಅರ್ಥಶಾಸ್ತ್ರ ಮುಖ್ಯಸ್ಥರಾದ ಪ್ರೊ ಚನ್ನ ಪೂಜಾರಿ ಹಾಗೂ ಎನ್ ಎಸ್ ಎಸ್ ಅಧಿಕಾರಿ ಜಿತೇಂದ್ರ ವಿ ರಾವ್ , ರೋಟರಿ ಕ್ಲಬ್ ನ ಪದಾಧಿಕಾರಿಗಳಾದ ನಾರಾಯಣ್ , ರಾಜಪಥ್ ರಾವ್, ಆಕ್ಸಿಸ್ ಬ್ಯಾಂಕ್ ನ ಪ್ರಬಂದಕರಾದ ಅಮರ್ ಪ್ರಸಾದ್ ಹಾಗೂ ಎನ್ ಎಸ್ ಎಸ್ ಸ್ವಯಂಸೇವಕರು ಉಪಸ್ಥಿತರಿದ್ದರು.
ಎನ್ ಎಸ್ ಎಸ್ ನಾಯಕ ಶ್ರವಣ್ ಸ್ವಾಗತಿಸಿದರು, ಸುಧೀರ್ ರಾವ್ ವಂದಿಸಿದರು ಹಾಗೂ ವಂದನಾ ಕಾರ್ಯಕ್ರಮ ನಿರೂಪಿಸಿದರು.
Kshetra Samachara
23/10/2021 12:06 pm