ಮಂಗಳೂರು: ತಮ್ಮ ತಂದೆಯ ಸಾವಿನ ಸೂತಕದ ನಡುವೆಯೇ ಮಂಗಳೂರಿನ ಖ್ಯಾತ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್ ಅವರು ಶಸ್ತ್ರಚಿಕಿತ್ಸೆ ನಡೆಸಿ ಇಬ್ಬರ ಜೀವ ಉಳಿಸಿ 'ವೈದ್ಯೋ ನಾರಾಯಣೋ ಹರಿಃ' ಪದವನ್ನು ಸಾರ್ಥಕಗೊಳಿಸಿದ್ದಾರೆ.
ವೈದ್ಯಕೀಯ ವೃತ್ತಿಗೆ ದಾರಿ ತೋರಿದ ಸ್ವತಃ ತಂದೆಯ ಉಸಿರಾಟ ಕೊನೆ ಹಂತದಲ್ಲಿದೆ ಎಂಬ ಸುದ್ದಿ ಬಂದಾಗ ಡಾ.ಪದ್ಮನಾಭ ಕಾಮತ್ ಆಸ್ಪತ್ರೆಯಲ್ಲಿದ್ದರು. ತರಾತುರಿಯಲ್ಲಿ ಮನೆಗೆ ತೆರಳಿ ತುರ್ತು ಚಿಕಿತ್ಸೆ ನೀಡಿದರೂ ವಯೋಸಹಜವಾಗಿ ಅವರು ಮಗನ ಮುಂದೆಯೇ ಕೊನೆಯುಸಿರೆಳೆದರು. ತಾವೇ ಸ್ವತಃ ವೈದ್ಯರಾದರೂ ತಂದೆ ಮೃತಪಟ್ಟಿರುವ ಸುದ್ದಿ ಘೋಷಿಸುವಂತಿಲ್ಲ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆದೊಯ್ದಾಗ ಅಲ್ಲಿ ವೈದ್ಯರು ಅವರ ತಂದೆ ನಿಧನರಾಗಿದ್ದಾರೆಂದು ಘೋಷಿಸಿದರು.
ಮೃತದೇಹವನ್ನು ಮತ್ತೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿರುವಾಗಲೇ ಹೃದ್ರೋಗಿಯೊಬ್ಬರಿಗೆ ತುರ್ತು ಚಿಕಿತ್ಸೆಯ ಅಗತ್ಯವಿದೆ ಎಂದು ಆಸ್ಪತ್ರೆಯಿಂದ ಕರೆ ಬಂದಿತ್ತು. ಇತ್ತ ಕಡೆ ಅಪ್ಪ ಸಾವು, ಅತ್ತ ಕಡೆ ಕರ್ತವ್ಯದ ಕರೆ. ಎರಡನ್ನೂ ತೂಗಿದ ಪದ್ಮನಾಭ ಕಾಮತರು ಕರ್ತವ್ಯದ ಕರೆಗೆ ಓಗೊಟ್ಟು ಆಸ್ಪತ್ರೆಗೆ ತೆರಳಿ ಹೃದ್ರೋಗಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ಆ ರೋಗಿಯನ್ನು ಬದುಕಿಸಿಯೇ ಬಿಟ್ಟರು.
ಆಸ್ಪತ್ರೆಯಿಂದ ತಿರುಗಿ ಬಂದ ಡಾ.ಪದ್ಮನಾಭ ಕಾಮತ್ ಅವರು ಅಪ್ಪನ ಮೃತದೇಹವನ್ನು ಮನೆಗೊಯ್ದರು. ಫೆ.27ರಂದು ಡಾ.ಪದ್ಮನಾಭ ಕಾಮತರ ಅಪ್ಪನ ಅಂತ್ಯಕ್ರಿಯೆ ಇನ್ನೇನು ನಡೆಯುತ್ತಿರುವಾಗಲೂ ವಾಟ್ಸ್ಆ್ಯಪ್ ಮೂಲಕ ಡಾ. ಕಾಮತರು ವೈದ್ಯಕೀಯ ಸಲಹೆಗಳನ್ನು ನೀಡುತ್ತಿದ್ದರು. ಅಪ್ಪನ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ ಅವರು ವಿರಮಿಸಿಕೊಳ್ಳಲೂ ಬಿಡುವಿಲ್ಲದಂತೆ ದೂರವಾಣಿ ಕರೆಯೊಂದು ಮೊಳಗುತ್ತಲೇ ಇತ್ತು. ಕರೆ ಸ್ವೀಕರಿಸಿದಾಗ ಸ್ನಾತಕೋತ್ತರ ವಿದ್ಯಾರ್ಥಿ ಮಾತನಾಡಿ, ಆಸ್ಪತ್ರೆಯ ಅಡುಗೆ ಸಿಬ್ಬಂದಿಯೊಬ್ಬರಿಗೆ ತೀವ್ರ ಹೃದಯಾಘಾತವಾಗಿದ್ದು, ತುರ್ತು ಚಿಕಿತ್ಸೆ ನೀಡಲಾಗಿದೆ. ಶಾಕ್ ಟ್ರೀಟ್‌ಮೆಂಟ್ ನೀಡಿ ಆಗಿದೆ. ಈಗ ರೋಗಿಯ ಹೃದಯ ಸ್ತಂಭನವಾಗಿದೆ ಎಂದಿದ್ದಾರೆ.
ಹೃದಯಾಘಾತಕ್ಕೆ ಒಳಗಾದ ವ್ಯಕ್ತಿ ಡಾ.ಪದ್ಮನಾಭ ಕಾಮತರಿಗೆ ತೀರಾ ಪರಿಚಿತರು ಆಗಿರಲಿಲ್ಲ. ತುರ್ತುಚಿಕಿತ್ಸೆ ನೀಡಿ, ಶಾಕ್ ಟ್ರೀಟ್‌ಮೆಂಟ್ ನೀಡಿಯೂ ಹೃದಯಸ್ತಂಭನವಾದರೆ ಆಂಜಿಯೋಪ್ಲಾಸ್ಟಿ ಮಾಡಲೇಬೇಕು ಎಂದು ಡಾ.ಕಾಮತರಿಗೆ ಅರಿವಿತ್ತು. ತಡವಾದರೆ ವ್ಯಕ್ತಿ ಬದುಕುವುದು ಕಷ್ಟ ಎಂದು ತಿಳಿದಿತ್ತು. ಹಾಗಾಗಿ ಕಿಂಚಿತ್ತೂ ತಡ ಮಾಡಲಿಲ್ಲ.
ಇತ್ತ ಮನೆಮಂದಿಯೆಲ್ಲ ಶೋಕದಲ್ಲಿ ಕುಳಿತಿದ್ದರೆ, ಮನೆಯವರಿಗೆ ಸಮಾಧಾನ ಮಾಡಿ ಕಾರು ಏರಿಕೊಂಡು ಹೊರಟೇಬಿಟ್ಟರು. ತತ್‌ಕ್ಷಣದ ಶಸ್ತ್ರಚಿಕಿತ್ಸೆಗೆ ಎಲ್ಲ ವ್ಯವಸ್ಥೆಗಳೂ ಸಜ್ಜಾಗಿದ್ದವು. ಆಸ್ಪತ್ರೆ ತಲುಪಿದ ಡಾ.ಕಾಮತರು ಆಪರೇಶನ್ ಥಿಯೇಟರ್ ಹೊಕ್ಕವರೇ ಕೆಲವೇ ನಿಮಿಷಗಳಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರೈಸಿದರು. ಆದರೆ, ಅರೆಕ್ಷಣ ತಡವಾಗಿದ್ದರೂ ಆ ವ್ಯಕ್ತಿ ಬದುಕುಳಿಯುವ ಸಾಧ್ಯತೆ ಕಡಿಮೆಯಿತ್ತು. ಆಪರೇಶನ್ ಯಶಸ್ವಿಯಾಗಿ ನಡೆದು ರೋಗಿಯ ಮುಖದಲ್ಲಿ ಮಂದಹಾಸ, ಮನೆಯವರಿಗೆ ನಿಟ್ಟುಸಿರು. ವಿದ್ಯಾರ್ಥಿಗಳ ಮುಖದಲ್ಲಿ ಆನಂದಬಾಷ್ಪ.
ಡಾ.ಕಾಮತರು ಮತ್ತೆ ಮನೆ ಕಡೆ ಹಾಜರು. ಇದಲ್ಲವೇ ಕರ್ತವ್ಯನಿಷ್ಠೆ! ಚಿಕಿತ್ಸೆ ಪಡೆದ ರೋಗಿ ಈಗ ಕ್ಷೇಮವಾಗಿದ್ದಾರೆ.
Kshetra Samachara
01/03/2021 09:05 pm