ಮಂಗಳೂರು: ದ.ಕ. ಜಿಲ್ಲೆಗೆ 24,500 ಡೋಸ್ ಕೊರೊನಾ ಲಸಿಕೆ ಸರಬರಾಜು ಆಗಿದ್ದು, ನಾಳೆಯಿಂದ ಜಿಲ್ಲೆಯ ಆರು ಲಸಿಕಾ ಕೇಂದ್ರಗಳಲ್ಲಿ ನೋಂದಣಿಯಾದ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈಗಾಗಲೇ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲೂಕಿನ 10,212 ಸರಕಾರಿ ಆಸ್ಪತ್ರೆ ಅಧಿಕಾರಿಗಳು, ಸಿಬ್ಬಂದಿ, 42,169 ಖಾಸಗಿ ಆಸ್ಪತ್ರೆಯ ಅಧಿಕಾರಿಗಳು, ಸಿಬ್ಬಂದಿ ಸೇರಿ ಒಟ್ಟು 52,381 ಫಲಾನುಭವಿಗಳು ಲಸಿಕೆ ಸ್ವೀಕರಿಸಲು ಈಗಾಗಲೇ ಕೋವಿನ್ ವೆಬ್ ಸೈಟ್ ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಸೋಮವಾರದ ಬಳಿಕ 89 ಸರಕಾರಿ ಸಂಸ್ಥೆಗಳು ಹಾಗೂ 17 ಖಾಸಗಿ ಸಂಸ್ಥೆಗಳಲ್ಲಿ ಕೊರೊನಾ ಲಸಿಕೆ ನೀಡಲಾಗುತ್ತದೆ. ಒಂದು ದಿನಕ್ಕೆ ನೂರು ಮಂದಿ ಫಲಾನುಭವಿಗಳಿಗೆ ಲಸಿಕೆ ನೀಡಲಾಗುತ್ತದೆ. ಈಗಾಗಲೇ ಕೋವಿನ್ ವೆಬ್ ಸೈಟ್ ನಲ್ಲಿ ನೋಂದಣಿ ಮಾಡಿದವರಿಗೆ ಮಾತ್ರ ಲಸಿಕೆ ನೀಡಲಾಗುತ್ತದೆ. ಲಸಿಕೆ ನೀಡಿದ ಬಳಿಕ ಫಲಾನುಭವಿಗಳು 30 ನಿಮಿಷಗಳ ಕಾಲ ಆರೋಗ್ಯ ಕಾರ್ಯಕರ್ತರ ನಿಗಾದಲ್ಲಿ ಕಡ್ಡಾಯವಾಗಿ ಇರಬೇಕಾಗುತ್ತದೆ. ಈ ಸಂದರ್ಭ ಯಾರಿಗಾದರೂ ಅಡ್ಡಪರಿಣಾಮ ಕಂಡು ಬಂದಲ್ಲಿ ಆರೋಗ್ಯ ತಂಡದ ಮೂಲಕ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾಹಿತಿ ನೀಡಿದರು.
Kshetra Samachara
15/01/2021 09:05 pm