ಮಣಿಪಾಲ: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗವು ಸಂಕೀರ್ಣವಾದ ಕ್ಯಾನ್ಸರ್ ಗಳನ್ನು ನಡೆಸುತ್ತಿದ್ದು ಇದನ್ನು ಭಾರತದ ಕೆಲವೇ ಪ್ರತಿಷ್ಠಿತ ಕ್ಯಾನ್ಸರ್ ಕೇಂದ್ರಗಳಲ್ಲಿ ನಡೆಸಲಾಗುತ್ತದೆ ಎಂದು ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯ ಶಸ್ತ್ರಚಿಕಿತ್ಸಕ ಡಾಕ್ಟರ್ ನವೀನ್ ಕುಮಾರ್
ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು ಶ್ವಾಸನಾಳದ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಅತ್ಯಂತ ಸಂಕೀರ್ಣ ಶಸ್ತ್ರಚಿಕಿತ್ಸೆ ಗಳಲ್ಲಿ ಒಂದು. ಕ್ಯಾನ್ಸರ್ ಗಡ್ಡೆ ಜೊತೆಗೆ ಶ್ವಾಸನಾಳದ ಭಾಗವನ್ನು ತೆಗೆದುಹಾಕಲಾಗುತ್ತದೆ ಮತ್ತು ಶ್ವಾಸನಾಳವನ್ನು ಕೆಳಗಿನ ಅಥವಾ ಮುಖ್ಯ ಶಾಖೆಗಳಿಗೆ ಸಂಪರ್ಕಿಸಲಾಗುತ್ತದೆ. ಈ ಶಸ್ತ್ರಚಿಕಿತ್ಸೆಯು ರೋಗಿಯ ಜೀವ ಉಳಿಸುವ ಮತ್ತು ಕ್ಯಾನ್ಸರ್ ಗುಣಪಡಿಸುವ ವಿಧಾನವಾಗಿದೆ. ಮಣಿಪಾಲದ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗವು ಇತ್ತೀಚೆಗೆ 70 ವರ್ಷದ ರೋಗಿ ಸೇರಿದಂತೆ ಇಂತಹ 4 ಕ್ಯಾನ್ಸರ್ ರೋಗಿಗಳಿಗೆ ಪ್ರಮುಖ ಶ್ವಾಸನಾಳ ಶಸ್ತ್ರಚಿಕಿತ್ಸೆಯನ್ನು ನಡೆಸಿದೆ. ಪ್ರಸ್ತುತ ಈ ರೋಗಿಯೂ ಒಂಬತ್ತು ತಿಂಗಳಿನಿಂದ ಆರೋಗ್ಯವಾಗಿದ್ದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯ ಶಸ್ತ್ರಚಿಕಿತ್ಸಕ ಡಾಕ್ಟರ್ ನವೀನ್ ಕುಮಾರ್ ಹೇಳಿದರು.
ಇದೇ ರೀತಿ ಎದೆಯೊಳಗೆ ಫುಟ್ಬಾಲ್ ಗಾತ್ರದ ಕ್ಯಾನ್ಸರ್ ಗಡ್ಡೆ ಇದ್ದ ಇಬ್ಬರು ವ್ಯಕ್ತಿಗಳಿಗೂ ಕೆಎಂಸಿಯಲ್ಲಿ ಪ್ರಮುಖ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ದೇಶದ ಕೆಲವೇ ಆಸ್ಪತ್ರೆಗಳಲ್ಲಿ ಈ ಸೌಲಭ್ಯ ಇದ್ದು ಮಣಿಪಾಲದ ಕೆಎಂಸಿಯಲ್ಲಿ ಕ್ಯಾನ್ಸರ್ ಕುರಿತು ಸಂಶೋಧನೆಯನ್ನು ಕೂಡ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
Kshetra Samachara
03/01/2021 09:55 pm