ಉಡುಪಿ: ವಿಶ್ವ ತಂಬಾಕು ರಹಿತ ದಿನಾಚರಣೆ ಪ್ರಯುಕ್ತ ತಂಬಾಕು ಸೇವನೆ ಅಪಾಯದ ಕುರಿತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಲಾವಿದ ಶ್ರೀನಾಥ್ ಮಣಿಪಾಲ್ ಇಂದು ಉಡುಪಿಯ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಪರಿಸರ ಸ್ನೇಹಿ ವಿಶಿಷ್ಟ ಕಲಾಕೃತಿಯನ್ನು ರಚಿಸಿದ್ದಾರೆ.
ಮಣಿಪಾಲ ಕೆಎಂಸಿ ಸಮುದಾಯ ವೈದ್ಯಕೀಯ ವಿಭಾಗದ ವತಿಯಿಂದ ಈ ಕಲಾಕೃತಿ ರಚಿಸಲಾಗಿದೆ. ಹಿರಿಯ ಕಲಾವಿದ ರಮೇಶ್ ರಾವ್ ಕಲಾಕೃತಿಯನ್ನು ಅನಾವರಣಗೊಳಿಸಿದರು.
ಈ ಸಂದರ್ಭ ಮಾತನಾಡಿದ ಕಲಾವಿದ ಶ್ರೀನಾಥ್ ಮಣಿಪಾಲ್, ‘ನಮ್ಮ ಪರಿಸರವನ್ನು ತಂಬಾಕಿನ ಅಪಾಯದಿಂದ ರಕ್ಷಿಸಿ ಎಂಬ ಧ್ಯೇಯ ವಾಕ್ಯದೊಂದಿಗೆ ತಂಬಾಕಿನಿಂದ ಉಂಟಾಗುವ ಕಾಯಿಲೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಲಾಕೃತಿಯನ್ನು ಪ್ರದರ್ಶಿಸಲಾಗಿದೆ. ಇದನ್ನು ಪರಿಸರ ಸ್ನೇಹಿ ವಸ್ತು ಬಳಸಿ ರಚಿಸಲಾಗಿದೆ. ಮುಖ್ಯವಾಗಿ ಕಾರ್ಡ್ ಬೋರ್ಡ್ ಗಳನ್ನು ಉಪಯೋಗಿಸಲಾಗಿದೆ ಎಂದರು.
ಈ ಕಲಾಕೃತಿಯಲ್ಲಿನ ಏಡಿಯು ಕ್ಯಾನ್ಸರ್ ನ್ನು ಪ್ರತಿಬಿಂಬಿಸುತ್ತದೆ. ಕೊಡೆಯನ್ನು ಇರಿಸಿ, ಕ್ಯಾನ್ಸರ್ ನ ನೆರಳು ನಮ್ಮ ಪರಿಸರದ ಮೇಲೆ ಬಿದ್ದಿರುವುದನ್ನು ಇದರಲ್ಲಿ ತೋರಿಸಲಾಗಿದೆ. ಆ ಮೂಲಕ ನಮ್ಮ ಪರಿಸರವನ್ನು ರಕ್ಷಿಸುವ ಸಂದೇಶವನ್ನು ಸಾರಲಾಗಿದೆ. ಅದೇ ರೀತಿ ತಂಬಾಕಿನ ಮೂಲಕ ಪಂಜರವನ್ನು ನಿರ್ಮಿಸಿದ್ದು, ಆ ಪಂಜರದಲ್ಲಿ ಸಿಲುಕಿರುವ ನಮ್ಮ ಪರಿಸರವನ್ನು ಹೊರ ತರಬೇಕೆಂಬ ಸಂದೇಶ ಕೂಡ ಕಲಾಕೃತಿಯಲ್ಲಿ ಅಡಕವಾಗಿದೆ. ಈ ಕಲಾಕೃತಿಯನ್ನು ಮುಂದೆ ಜನ ಸೇರುವ ಸ್ಥಳಗಳಲ್ಲಿ ಇರಿಸಿ ಜನಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
PublicNext
11/06/2022 07:25 pm