ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಮಲಗಿಕೊಂಡೇ ಓದಿ ಎಸ್ಸೆಸೆಲ್ಸಿಯಲ್ಲಿ 580 ಅಂಕ ಪಡೆದಳು ಶ್ರಾವ್ಯಾ!

ವಿಶೇಷ ವರದಿ: ರಹೀಂ ಉಜಿರೆ

ಕುಂದಾಪುರ: ರಾಜ್ಯದಲ್ಲಿ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಗಾರೆ ಕೆಲಸದವರ ಮಕ್ಕಳು, ಮೀನುಗಾರರ ಮಕ್ಕಳು, ಬಡ ರೈತರ ಮಕ್ಕಳು...ಹೀಗೆ ಹಲವರು ಓದಿ ಸಾಧನೆ ಮಾಡಿದ್ದನ್ನು ಕೇಳಿದ್ದೇವೆ. ಆದರೆ, ಕುಂದಾಪುರ ತಾಲೂಕಿನ ವಿದ್ಯಾರ್ಥಿನಿಯೊಬ್ಬಳು ಶಾಲೆ ಮೆಟ್ಟಿಲು ಹತ್ತಲಾರದೆ, ಮಲಗಿಕೊಂಡೇ ಓದಿ 580 ಅಂಕ ಗಳಿಸಿ ಅತ್ಯಪೂರ್ವ ಸಾಧನೆಯನ್ನೇ ಮಾಡಿದ್ದಾಳೆ!

ಹೌದು, ಕುಂದಾಪುರ ತಾಲೂಕಿನ ಹಕ್ಲಾಡಿ ರಾಜು ಪೂಜಾರಿ- ಸುಜಾತಾ ದಂಪತಿ ಪುತ್ರಿ ಶ್ರಾವ್ಯಾ ಕರುಳು ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಾಳೆ. ಹೀಗಾಗಿ ಈಕೆಗೆ ಆರು ತಿಂಗಳು ಶಾಲೆಗೆ ಹೋಗಲು ಆಗಿರಲಿಲ್ಲ. ಮಲಗಿದ ಸ್ಥಿತಿಯಲ್ಲೇ ಓದು- ಬರಹ ಅಭ್ಯಸಿಸಿ, ಈಕೆ 580 ಅಂಕ ತರುವ ಮೂಲಕ ಎಲ್ಲರೂ ಅಚ್ಚರಿ ಪಡುವಂತಹ ಶೈಕ್ಷಣಿಕ ಸಾಧನೆ ಮೆರೆದಿದ್ದಾಳೆ.

ಆರು ತಿಂಗಳು ಮಂಚದಲ್ಲಿ ಮಲಗಿದ ಸ್ಥಿತಿಯಲ್ಲಿದ್ದರೂ ನೋಟ್ಸ್ ಮತ್ತು ಛಾಯಾಪ್ರತಿ ಓದಿ ಶ್ರಾವ್ಯಾ ಈ ಸಾಧನೆ ಮಾಡಿದ್ದು ವಿಶೇಷ.

ಎಲ್ಲರಂತೆ ಆಕ್ಟೀವ್ ಆಗಿದ್ದ ಶ್ರಾವ್ಯಾ, ಐಬಿಡಿ ಎಂಬ ಕರುಳು ಸಂಬಂಧಿ ಕಾಯಿಲೆಯಿಂದಾಗಿ ದೇಹದ ತೂಕ ಕಳೆದುಕೊಂಡು ಈಗ ಕೇವಲ 21 ಕೆ.ಜಿ.ಗೆ ಇಳಿದಿದ್ದಾಳೆ. ಈಕೆ ಆತ್ರಾಡಿಯ ಮಕ್ಕಳ ಕೂಟ ಶಾಲೆಗೆ ದಾಖಲಾಗಿ ಎಸ್ಸೆಸೆಲ್ಸಿ ಪೂರೈಸಿದ್ದು, ಮಕ್ಕಳ ಕೂಟ ಶಾಲಾ ಸಂಚಾಲಕ ಸುಭಾರ್ ಶೆಟ್ಟಿ ಹಾಗೂ ದೀಪಿಕಾ ಶೆಟ್ಟಿ ಅನಾರೋಗ್ಯದ ನಡುವೆಯೂ ಶ್ರಾವ್ಯಾಳ ಓದಿನ ತುಡಿತ ಕಂಡು ನೋಟ್ಸ್ ಹಾಗೂ ಆನ್‌ಲೈನ್‌ ಪಾಠದ ಛಾಯಾಪ್ರತಿ ನೀಡಿ ಸಹಕರಿಸಿದ್ದರು. ಶಾವ್ಯಾಳ ತಂದೆ- ತಾಯಿ ಹೆಮ್ಮಾಡಿಯಲ್ಲಿ ಚಿಕ್ಕ ಫಾಸ್ಟ್ ಫುಡ್ ಅಂಗಡಿ ನಡೆಸುತ್ತಿದ್ದಾರೆ.

ಶ್ರಾವ್ಯಾಳ ದೈಹಿಕ ಶಕ್ತಿ ಕುಂದಿದ್ದರೂ, ಓದುವ ಆಸಕ್ತಿ ಬತ್ತಿಲ್ಲ. ಪಿಯುಸಿಯಲ್ಲಿ ಪಿಸಿಎಂಬಿ ಆಯ್ಕೆ ಮಾಡಿ ಸ್ವಾವಲಂಬಿ ಜೀವನ ಸಾಗಿಸಬೇಕೆಂಬ ಕನಸು ಕಟ್ಟಿಕೊಂಡಿದ್ದಾಳೆ, ಸದ್ಯ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈ ಸಾಧಕಿಯ ಭವಿಷ್ಯಕ್ಕೊಂದು ಬೆಸ್ಟ್ ಆಫ್ ಲಕ್ ಹೇಳೋಣ...

Edited By :
PublicNext

PublicNext

23/05/2022 08:52 pm

Cinque Terre

46.23 K

Cinque Terre

2

ಸಂಬಂಧಿತ ಸುದ್ದಿ