ಮಂಗಳೂರು: ಕೊರೊನಾ ಹಾವಳಿ ಮಧ್ಯೆ ಮತ್ಸ್ಯ ಕ್ಷಾಮವೂ ನದಿ ಮೀನುಗಾರರನ್ನು ಈ ಮೊದಲು ಹಿಂಡಿ ಹಿಪ್ಪೆ ಮಾಡಿತ್ತು. ಇದೀಗ ಗಾಯದ ಮೇಲೆ ಬರೆ ಎಳೆದಂತೆ ಹೊಸ ಸಮಸ್ಯೆ ಯೂ ಉದ್ಭವಿಸಿದೆ.
ಹೌದು, ನದಿ ಮೀನುಗಾರಿಕೆ ಮಾಡಿ ಬರುವ ಮೀನುಗಾರರ ಕಾಲು, ಕೈ ಸಹಿತ ದೇಹವಿಡೀ ತುರಿಕೆ, ಗುಳ್ಳೆಗಳು ಏಳುತ್ತಿವೆ!
ಮಂಗಳೂರಿನ ಬೆಂಗ್ರೆ ಪ್ರದೇಶ ಸುತ್ತ ಮುತ್ತಲಿನ ಗುರುಪುರ ನದಿ ಮೀನುಗಾರರೀಗ ಈ ಚರ್ಮ ವ್ಯಾಧಿಯಿಂದಾಗಿ ಬಸವಳಿದು, ಕಂಗಾಲಾಗಿದ್ದಾರೆ.
"ನಮ್ಮ ಈ ದುಸ್ಥಿತಿಗೆ ಅಲ್ಲಲ್ಲಿ ಫ್ಯಾಕ್ಟರಿಗಳು ತಮ್ಮ ಕಲ್ಮಶಯುಕ್ತ ಅಪಾಯಕಾರಿ ತ್ಯಾಜ್ಯ ನೀರನ್ನು ನದಿಯ ಒಡಲಿಗೆ ಅಮಾನವೀಯತೆಯಿಂದ ಬಿಡುತ್ತಿರುವುದೇ ಕಾರಣ" ಎಂದು ಈ ಮೀನುಗಾರರ ಮುಂದಾಳುಗಳು ದೂರಿದ್ದಾರೆ.
ದಿನನಿತ್ಯ ನದಿ ಮೀನುಗಾರಿಕೆ ಕಸುಬಿನ ನಂತರ ಸತತ ಮೈ ತುರಿಕೆ, ಕೆಂಪು ವರ್ಣದ ಗುಳ್ಳೆಗಳ ನೋವಿನಿಂದಾಗಿ ನಮ್ಮ ಶರೀರದ ಕಸುವೇ ಇಂಗಿದಂತಾಗುತ್ತಿವೆ, ಜತೆಗೆ ಈ ಚರ್ಮ ರೋಗದ ಚಿಕಿತ್ಸೆಗಾಗಿ ಸಾಕಷ್ಟು ಖರ್ಚೂ ಮಾಡಬೇಕಾಗಿದೆ ಎಂದು ಈ ಬಡಪಾಯಿ ಮೀನುಗಾರರು ಅಳಲು ತೋಡಿಕೊಂಡಿದ್ದಾರೆ.
ಕ್ಷೇತ್ರದ ಸಂಸದರು, ಶಾಸಕರು, ಜಿಲ್ಲಾಧಿಕಾರಿಗಳು ಈ ಗಂಭೀರ ಸಮಸ್ಯೆಯತ್ತ ಚಿತ್ತ ಹರಿಸ ಬೇಕಾಗಿ ಮನವಿ ಮಾಡಿರುವ ಅವರು, ತಪ್ಪಿದರೆ ಜಿಲ್ಲಾಧಿಕಾರಿ ಕಚೇರಿ ಎದುರು ತೀವ್ರ ಪ್ರತಿಭಟನೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.
Kshetra Samachara
16/10/2020 12:34 pm