ಮಂಗಳೂರು: ಕೊರೊನಾ ಸೋಂಕು ಅತಿ ಹೆಚ್ಚಾಗಿ ಕಂಡು ಬಂದಿರುವ ಕೇರಳ ರಾಜ್ಯದ ಗಡಿ ಭಾಗ ಹಂಚಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಠಿಣವಾಗಿ ವೀಕೆಂಡ್ ಕರ್ಫ್ಯೂ ಮಾಡಲಾಗಿದೆ. ಭಾನುವಾರ ರಾತ್ರಿ ಧರ್ಮಸ್ಥಳಕ್ಕೆ ಬಂದ ಯಾತ್ರಿಕರು ಊಟ, ವಸತಿ ಇಲ್ಲದೆ ಪರದಾಡಬೇಕಾಯಿತು.
ಜಿಲ್ಲಾಡಳಿತದ ನಿರ್ದೇಶನದಂತೆ ಧರ್ಮಸ್ಥಳದಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶವಿದೆ. ಸೇವೆ ಹಾಗೂ ಪ್ರಸಾದಕ್ಕೆ ಅವಕಾಶವಿಲ್ಲ. ಊಟ, ವಸತಿ ಸೌಲಭ್ಯವನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಜಿಲ್ಲಾಡಳಿತದ ಪೂರ್ವಾಪರ ಇಲ್ಲದ ಈ ಆದೇಶದಿಂದ ಬಡ ಭಕ್ತರು ಮಾತ್ರ ಪಡಬಾರದ ಕಷ್ಟ ಅನುಭವಿಸಿದ್ದಾರೆ. ಬಸ್ ಸಂಚಾರಕ್ಕೆ ಅವಕಾಶ ನೀಡಿ, ಉಳಿದ ವ್ಯವಸ್ಥೆಯನ್ನು ತಡೆಹಿಡಿದ ಜಿಲ್ಲಾಡಳಿತದ ಕ್ರಮದಿಂದ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತರು ರಾತ್ರಿ ಮಲಗಲು ವ್ಯವಸ್ಥೆ ಇಲ್ಲದೇ, ರಸ್ತೆಯಲ್ಲಿ ಮಲಗಿ, ಮಳೆಗೆ ನರಕ ಅನುಭವಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶದಂತೆ ಧರ್ಮಸ್ಥಳ ವಾರಾಂತ್ಯದಲ್ಲಿ ಸಂಪೂರ್ಣ ಬಂದ್ ಆಗಿದ್ದು, ದೇವರ ದರ್ಶನ ಸೇರಿ ವಸತಿ ಗೃಹದಲ್ಲಿ ತಂಗಲು ಕೂಡ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಜಿಲ್ಲಾಡಳಿತದ ಆದೇಶದಂತೆಯೇ ಶ್ರೀಕ್ಷೇತ್ರ ಧರ್ಮಸ್ಥಳದ ಆಡಳಿತ ಮಂಡಳಿ ಕೂಡ ವಸತಿಗೃಹಗಳನ್ನು ಮುಚ್ಚಿದೆ. ಹೀಗಿದ್ದರೂ ರಾತ್ರಿ ಹೊರಜಿಲ್ಲೆಗಳಿಂದ ಭಕ್ತರು ಆಗಮಿಸಿ ಭಕ್ತರ ಪರದಾಡಿದ್ದಾರೆ.
Kshetra Samachara
10/08/2021 10:25 am