ಮಂಗಳೂರು: ಕೊರೊನಾದಿಂದಾಗಿ ಬಂದ್ ಆಗಿದ್ದ ಕಾಲೇಜುಗಳು ಈಗಾಗಲೇ ಆರಂಭವಾಗಿದೆ. ಆದರೆ ಈ ಮಧ್ಯೆ ಆಘಾತಕಾರಿ ವರದಿ ಹೊರ ಬಿದ್ದಿದೆ.
ಹೌದು. ಕಾಲೇಜುಗಳು ಪುನರಾರಂಭಗೊಂಡ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ 600 ವಿದ್ಯಾರ್ಥಿಗಳಿಗೆ ಕೊರೊನಾ ದೃಢಪಟ್ಟಿದೆ. ಸೋಂಕಿತ ವಿದ್ಯಾರ್ಥಿಗಳಲ್ಲಿ ಬಹುತೇಕರು ನೆರೆ ರಾಜ್ಯ ಕೇರಳ ಮೂಲದವರೆಂದು ಹೇಳಲಾಗುತ್ತಿದೆ.
ಕೆಲ ದಿನಗಳ ಹಿಂದಷ್ಟೇ ಕಾಲೇಜು ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಮಾಡಲಾಗಿತ್ತು. ಇದರಲ್ಲಿ 600 ವಿದ್ಯಾರ್ಥಿಗಳಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕು ದೃಢಪಟ್ಟ ವಿದ್ಯಾರ್ಥಿಗಳು ತಮ್ಮ ತಮ್ಮ ಹಾಸ್ಟೆಲ್‌ಗಳಲ್ಲಿ ಕ್ವಾರಂಟೈನ್‌ಗೊಳಗಾಗಿದ್ದಾರೆ. ಕೆಲವರು ಫ್ಲ್ಯಾಟ್‌ಗಳಲ್ಲಿ ಇನ್ನೂ ಕೆಲವರು ಕೋವಿಡ್ ಕೇರ್ ಕೇಂದ್ರಗಳಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಇದೀಗ ಭೌತಿಕ ತರಗತಿಗಳೂ ಕೂಡ ಆರಂಭವಾಗಿದ್ದು, ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಜಿಲ್ಲೆಯ 29 ಶಿಕ್ಷಣ ಸಂಸ್ಥೆಗಳನ್ನು ಈಗಾಗಲೇ ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಡಾ. ಅಶೋಕ್, "ಪರೀಕ್ಷೆ ಹಾಗೂ ಭೌತಿಕ ತರಗತಿ ಸಂದರ್ಭದಲ್ಲಿ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡದ ಬಹುತೇಕ ಕಾಲೇಜುಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಕಳೆದ ಕೆಲವು ವಾರಗಳಲ್ಲಿ ಪರೀಕ್ಷೆಗೆ ಹಾಜರಾದ ಹೆಚ್ಚಿನ ವಿದ್ಯಾರ್ಥಿಗಳು, ಕೆಲವು ಸಂಸ್ಥೆಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಲು ವಿಫಲವಾದ ಕಾರಣ ಕೋವಿಡ್ ಸೋಂಕಿಗೊಳಗಾಗಿದ್ದಾರೆ" ಎಂದರು.
Kshetra Samachara
24/08/2021 12:09 pm