ಕಾಪು: ಕಾಪು ಕ್ಷೇತ್ರ ಬಿಜೆಪಿ ಮತ್ತು ಬಿಜೆಪಿ ಮಹಿಳಾ ಮೋರ್ಚಾದ ಆಶ್ರಯದಲ್ಲಿ ಹಮ್ಮಿಕೊಂಡ ಸೇವಾ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಪ್ರಸಾದ್ ನೇತ್ರಾಲಯ ಉಡುಪಿ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾದ ನೇತ್ರ ತಪಾಸಣೆ ಶಿಬಿರ ಮತ್ತು ಕನ್ನಡಕ ವಿತರಣೆ ಇಂದು ಕಾಪು ಶ್ರೀ ವೀರಭದ್ರ ಸಭಾಭವನದಲ್ಲಿ ನಡೆಯಿತು.
ಶಿಬಿರ ಉದ್ಘಾಟಿಸಿದ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಪಂಚೇಂದ್ರಿಯಗಳಲ್ಲಿ ಪ್ರಮುಖ ಅಂಗವಾದ ಕಣ್ಣಿನ ರಕ್ಷಣೆಯ ಬಗ್ಗೆ ಜನರು ಸ್ವಯಂ ಜಾಗೃತಿ ವಹಿಸಿಕೊಳ್ಳುವುದು ಅತಿ ಅಗತ್ಯ. ಈ ನಿಟ್ಟಿನಲ್ಲಿ ಪ್ರಸಾದ್ ನೇತ್ರಾಲಯದ ಸಹಯೋಗದೊಂದಿಗೆ ಬಿಜೆಪಿ ಮಹಿಳಾ ಮೋರ್ಚಾ ಹಮ್ಮಿಕೊಂಡಿರುವ ಕಾರ್ಯಕ್ರಮ ಅರ್ಥಪೂರ್ಣ ಎಂದರು.
ಪ್ರಸಾದ್ ನೇತ್ರಾಲಯದ ವೈದ್ಯಾಧಿಕಾರಿ ಡಾ. ಕೃಷ್ಣಪ್ರಸಾದ್ ಮಾತನಾಡಿ, ಜನರು ಇತರ ಯಾವುದೇ ರೀತಿಯ ಆರೋಗ್ಯ ತಪಾಸಣೆಗೆ ಮುಂದಾಗುವ ಮೊದಲು ಸರಕಾರದ ಕೋವಿಡ್ ನಿರ್ಬಂಧ ಪಾಲನೆ ಅತಿ ಮುಖ್ಯ. ಕಣ್ಣಿನ ಸಂಬಂಧಿ ಖಾಯಿಲೆ ಬಗ್ಗೆ ಅತಿ ಹೆಚ್ಚಿನ ಜಾಗೃತಿ ವಹಿಸಿಕೊಳ್ಳುವುದು ಅಗತ್ಯವಾಗಿದ್ದು, ಇದಕ್ಕೆ ಪೂರಕವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ ಅಂಧ ಮುಕ್ತ ಭಾರತ ನಿರ್ಮಾಣಕ್ಕೆ ಪ್ರಸಾದ್ ನೇತ್ರಾಲಯ ಸಂಪೂರ್ಣ ಸಹಕಾರ ನೀಡಲಿದೆ ಎಂದರು.
ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್, ಉಡುಪಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಗೀತಾಂಜಲಿ ಎಂ. ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.
Kshetra Samachara
03/10/2020 08:30 pm