ಮುಲ್ಕಿ: ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಭಾನುವಾರ ಬೆಳಿಗ್ಗೆ ಅಲ್ಲಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ಸರಳ ರೀತಿಯಲ್ಲಿ ನಡೆದಿದ್ದು ಮಧ್ಯಾಹ್ನ ದ ಬಳಿಕ ಮುಲ್ಕಿ ತಾಲೂಕು ನಿಶಬ್ದವಾಗಿದೆ.
ಬೆಳಗ್ಗೆ ತಾಲೂಕು ವ್ಯಾಪ್ತಿಯ ಹಳೆಯಂಗಡಿ, ಮುಲ್ಕಿ ಪಟ್ಟಣ, ಕಿನ್ನಿಗೋಳಿ, ಪಕ್ಷಿಕೆರೆ, ಪಡುಪಣಂಬೂರು ಸಹಿತ ಅನೇಕ ಗ್ರಾಮಗಳಲ್ಲಿ 75ನೇ ಸ್ವಾತಂತ್ರ್ಯೋತ್ಸವ ಹಾಗೂ ಕೊರೊನಾ ವಾರಿಯರ್ಸ್ ಸನ್ಮಾನ ನಡೆದಿದೆ.
ಮಧ್ಯಾಹ್ನದ ಬಳಿಕ ಸರಕಾರದ ಕೊರೊನಾ ನಿಯಮಗಳ ಪ್ರಕಾರ ವೀಕೆಂಡ್ ಕರ್ಫ್ಯೂ ಜಾರಿಯಾಗಿದ್ದು ಮುಲ್ಕಿ ತಾಲೂಕು ಸ್ತಬ್ಧವಾಗಿದೆ. ಆದರೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಎಂದಿನಂತೆ ತಡೆರಹಿತ ಬಸ್ಸ್ ಹಾಗೂ ಅನ್ಯ ರಾಜ್ಯಗಳ ಸರಕಾರಿ ಬಸ್ಸ್ ಸಂಚಾರ ಅಬಾಧಿತವಾಗಿತ್ತು.
ಪೇಟೆಯಲ್ಲಿ ಮೆಡಿಕಲ್ ಅಂಗಡಿಗಳನ್ನು ಹೊರತುಪಡಿಸಿದರೆ ಹೋಟೆಲ್ ಕೂಡ ಮುಚ್ಚಲಾಗಿದ್ದು ಭಾನುವಾರದ ರಜಾ ಘೋಷಿಸಲಾಗಿತ್ತು!
ಬೆಳಗ್ಗೆ ಸ್ವಾತಂತ್ರ್ಯೋತ್ಸವಕ್ಕೆ ಜನ ಗುಂಪು ಗುಂಪಾಗಿ ಸೇರಿದ್ದು ಆಗ ಕೊರೊನಾ ಬರುವುದಿಲ್ಲವೇ? ಸಂಜೆ ಮಾತ್ರ ಕೊರೊನಾ ಬರತ್ತಾ ಎಂದು ವ್ಯಾಪಾರಸ್ಥರು ಆಕ್ರೋಶ ವ್ಯಕ್ತ ಪಡಿಸುತ್ತಿರುವುದು ಸಾಮಾನ್ಯವಾಗಿತ್ತು.
ಉಳಿದಂತೆ ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಕೊರೊನಾ ವೀಕೆಂಡ್ ಕರ್ಫ್ಯೂ ಯಶಸ್ವಿಯಾಗಿದ್ದರೂ ಮುಲ್ಕಿ ರಾಷ್ಟ್ರೀಯ ಹೆದ್ದಾರಿ ಹಾಗೂ ಒಳರಸ್ತೆಯಲ್ಲಿ ಅನಗತ್ಯ ತಿರುಗಾಟ ಎಂದಿನಂತಿತ್ತು.
ಭಾನುವಾರ ಮುಲ್ಕಿ ತಾಲೂಕಿನ ಕಿಲ್ಪಾಡಿಯಲ್ಲಿ 1, ಅತಿಕಾರಿಬೆಟ್ಟುನಲ್ಲಿ 2 ,ಕೆಮ್ರಾಲ್ ಗ್ರಾಪಂ ವ್ಯಾಪ್ತಿಯ ಅತ್ತೂರುನಲ್ಲಿ 1,ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ತಾಳಿಪಾಡಿಯಲ್ಲಿ 1 ,ಎಳತ್ತೂರುನಲ್ಲಿ 2 ಸೇರಿದಂತೆ ಒಟ್ಟು 7 ಪಾಸಿಟಿವ್ ಪ್ರಕರಣ ದಾಖಲಾಗಿದೆ.
Kshetra Samachara
15/08/2021 08:41 pm