ಉಡುಪಿ : ದಕ್ಷಿಣ ಆಫ್ರಿಕಾ ಸೇರಿದಂತೆ ವಿಶ್ವದ ಕೆಲವು ದೇಶಗಳಲ್ಲಿ ಕೋವಿಡ್ ನ ಹೊಸ ರೂಪಾಂತರಿ ತಳಿ ಒಮಿಕ್ರಾನ್ ಪ್ರಸರಣದ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿರುವುದರಿಂದ ಸರ್ವೇಕ್ಷಣ ಚಟುವಟಿಕೆಗಳನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ಕೋವಿಡ್ ಪರೀಕ್ಷೆಯ ಗುರಿಯನ್ನು ಹಚ್ಚಿಸಿ ಕರ್ನಾಟಕ ಸರ್ಕಾರ ಸುತ್ತೋಲೆ ಹೊರಡಿಸಿದೆ. ಅದರಂತೆ ಜಿಲ್ಲೆಯಲ್ಲಿ ಕೋವಿಡ್ ನ ಹೊಸ ರೂಪಾಂತರಿ ಪ್ರಸರಣ ತಡೆಗೆ ಅಗತ್ಯ ವಿರುವ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ತಿಳಿಸಿದ್ದಾರೆ.
ಸರ್ಕಾರದ ಹೊಸ ಮಾರ್ಗಸೂಚಿಯಂತೆ ಉಡುಪಿ ಜಿಲ್ಲೆಯಲ್ಲಿ ದೈನಂದಿನ ಕೋವಿಡ್ ಪರೀಕ್ಷೆ ಗುರಿ 3000 ದಿಂದ 4000 ಹೆಚ್ಚಿಸಿ ನಿಗದಿಪಡಿಸಲಾಗಿದೆ. ರೋಗಲಕ್ಷಣ ಹೊಂದಿರುವವರು , ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕ ಹೊಂದಿರುವವರು ಮತ್ತು ಹೈ ರಿಸ್ಕ್ ಹೊಂದಿರುವ ಗುಂಪಿನ ವ್ಯಕ್ತಿಗಳಿಗೆ ಕೋವಿಡ್ ಪರೀಕ್ಷೆ ಮಾಡುವ ಪ್ರಕ್ರಿಯೆಯನ್ನು ಮುಂದುವರಿಸುವುದು ಮತ್ತು ಪರೀಕ್ಷಾ ಪ್ರಮಾಣವನ್ನು ಹೆಚ್ಚಿಸಲಾಗುವುದು ಎಂದರು.
ಪ್ರೌಢಶಾಲೆಗಳು ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿ, ಹೋಟೆಲ್ ಗಳು ಮತ್ತು ರೆಸ್ಟೋರೆಂಟ್ ಗಳ ಸಿಬ್ಬಂದಿ,ಮಾಲ್ ಗಳಲ್ಲಿರುವ ಅಂಗಡಿ ಮುಂಗಟ್ಟುಗಳ ವರ್ತಕರು, ಕ್ಯಾಟರಿಂಗ್ ಸಿಬ್ಬಂದಿ ಮತ್ತು ಮನೆಮನೆಗಳಿಗೆ ವಿತರಣೆ ಮಾಡುವ ಸಿಬ್ಬಂದಿ, ಕಾರ್ಖಾನೆಗಳ ಸಿಬ್ಬಂದಿ, ಎಲ್ಲ ಕಚೇರಿಗಳ ಸಿಬ್ಬಂದಿ ಪಬ್ ಮತ್ತು ಬಾರ್ ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ, ಕೆಲವೊಂದು ಸಂದರ್ಭಗಳಲ್ಲಿ ಸಾರ್ವಜನಿಕರು ಗುಂಪು ಸೇರಿದಾಗ Random ಪರೀಕ್ಷೆ ನಡೆಸಲಾಗುತ್ತದೆ ಎಂದು ಹೇಳಿದರು.
ನಿಗದಿಪಡಿಸಿದ ಗುರಿಯಲ್ಲಿ ಶೇಕಡ 50 ರಷ್ಟು ಜಿಲ್ಲಾ ಕೇಂದ್ರದಲ್ಲಿ ಮತ್ತು ಉಳಿದ 50 ಗ್ರಾಮೀಣ ಪ್ರದೇಶಗಳಲ್ಲಿ ಪರೀಕ್ಷೆ ಮಾಡುವುದು. ಪರೀಕ್ಷೆಯಲ್ಲಿ ಶೇಕಡ 10 ರಷ್ಟು ಮಕ್ಕಳನ್ನು ಪರೀಕ್ಷೆಗೆ ಒಳಪಡಿಸುವುದು. ಐಸಿಎಂಆರ್ ಮಾರ್ಗಸೂಚಿ ಪ್ರಕಾರ ಎಲ್ಲ ರೋಗಲಕ್ಷಣ ಸಹಿತ ಪ್ರಕರಣಗಳನ್ನು ಮೊದಲಿಗೆ Rat ಪರೀಕ್ಷೆಗೆ ಒಳಪಡಿಸುವುದು, ಫಲಿತಾಂಶ ನೆಗಟಿವ್ ಬಂದಲ್ಲಿ ಆರ್ಟಿಪಿಸಿಆರ್ ಪರೀಕ್ಷೆ ಮಾಡುವುದು.
ದಕ್ಷಿಣ ಆಫ್ರಿಕಾ, ಬೋಟ್ಸುವಾನ ಮತ್ತು ಹಾಂಕಾಂಗ್ ದೇಶಗಳಲ್ಲಿ ಕೋವಿಡ್ ನ ರೂಪಾಂತರಿ ಪ್ರಭೇದ ಪತ್ತೆಯಾದ ಹಿನ್ನೆಲೆಯಲ್ಲಿ ವಿದೇಶಿ ಪ್ರಯಾಣಿಕರನ್ನು ತಪಾಸಣೆ ಪರೀಕ್ಷೆಗೊಳಪಡಿಸುವ ನಿಟ್ಟಿನಲ್ಲಿ ಕೆಳಕಂಡ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳುವಂತೆ ಕರ್ನಾಟಕ ಸರ್ಕಾರ ಸುತ್ತೋಲೆ ಹೊರಡಿಸಿದೆ.
ದಕ್ಷಿಣ ಆಫ್ರಿಕಾ, ಬೋಟ್ಸುವಾನ ಮತ್ತು ಹಾಂಕಾಂಗ್ ನಿಂದ ಬರುವ ಪ್ರಯಾಣಿಕರಿಗೆ ಕಡ್ಡಾಯವಾಗಿ RTPCR ಪರೀಕ್ಷೆ ಮಾಡಬೇಕು ಮತ್ತು ನೆಗೆಟಿವ್ ವರದಿ ಬಂದ ನಂತರವೇ ವಿಮಾನ ನಿಲ್ದಾಣದಿಂದ ನಿರ್ಗಮಿಸಲು ಅನುಮತಿಸಬೇಕು. ಈ ಮೂರು ದೇಶಗಳಿಂದ ಕಳೆದ 15 ದಿನಗಳಿಂದ ಈಚೆಗೆ ಬಂದಿರುವ ಪ್ರಯಾಣಿಕರನ್ನು ಪತ್ತೆ ಹಚ್ಚಿ RTPCR ಪರೀಕ್ಷೆಗೆ ಒಳಪಡಿಸಬೇಕು. ಪ್ರಯಾಣಿಕರು ಕೋವಿಡ್ ಸೋಂಕಿತ ಆಗಿದ್ದಲ್ಲಿ ಅವರನ್ನು 10 ದಿನಗಳ ಕಾಲ ಕಡ್ಡಾಯ ಸಾಂಸ್ಥಿಕ ಪ್ರತ್ಯೇಕತೆಗೆ ಒಳಪಡಿಸಬೇಕು.ಪಾಸಿಟಿವ್ ಬಂದಿರುವ ಪರೀಕ್ಷಾ ಮಾದರಿಗಳನ್ನು ಕಡ್ಡಾಯವಾಗಿ ತಕ್ಷಣ ಜಿನೋಮಿಕ್ ಸಿಕ್ವೆನ್ಸಿಂಗ್ ಪರೀಕ್ಷೆಗೆ ಒಳಪಡಿಸಬೇಕು. ವಿದೇಶದಿಂದ ಬರುವ ಎಲ್ಲ ಪ್ರಯಾಣಿಕರು ಪರೀಕ್ಷೆಗೆ ಒಳಪಡಬೇಕು.
ಜಿಲ್ಲೆಯಲ್ಲಿ ಈ ಮೇಲ್ಕಂಡ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಪ್ರಥಮ ಆದ್ಯತೆ ಎಂದು ಪರಿಗಣಿಸಿ , ಆರೋಗ್ಯ ಇಲಾಖೆ ಮತ್ತು ಇತರ ಪ್ರಮುಖ ಇಲಾಖೆಗಳ ಸಹಕಾರ ಮತ್ತು ಸಮನ್ವಯದೊಂದಿಗೆ ಹಾಗೂ ಜಿಲ್ಲಾಡಳಿತದ ಸೂಕ್ತ ಮಾರ್ಗದರ್ಶನ ಮತ್ತು ನಿಗಾವಣೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದ್ದಾರೆ.
Kshetra Samachara
29/11/2021 09:17 pm