ಮಂಗಳೂರು: ಸ್ಯಾಂಡಲ್ ವುಡ್ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಅಕಾಲಿಕ ಸಾವಿನ ಬಳಿಕ ಕಪೋಲಕಲ್ಪಿತ ಹೇಳಿಕೆಗಳು, ಚರ್ಚೆಗಳು ನಡೆಯುತ್ತಿದೆ. ಈ ರೀತಿಯ ಆಧಾರ ರಹಿತ ಚರ್ಚೆಗಳನ್ನು ನಡೆಸುವುದು ತಪ್ಪು ಎಂದು ಪ್ರಖ್ಯಾತ ವೈದ್ಯ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಹೇಳಿದರು.
ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ನೊಂದಿಗೆ ಅವರು ಮಾತನಾಡಿ, ಇತ್ತೀಚೆಗೆ ಯುವಕರಲ್ಲಿ ಹಠಾತ್ ಹೃದಯಘಾತ ಹೆಚ್ಚುತ್ತಿದೆ. ಮಾಧ್ಯಮಗಳು ಹಿರಿಯ ವೈದ್ಯರ ಅಭಿಪ್ರಾಯ ಕೇಳುತ್ತಿದೆ. ಆದರೆ ಬೇಸರದ ಸಂಗತಿಯೆಂದರೆ ವೈದ್ಯರುಗಳು ವಸ್ತುನಿಷ್ಠ ಹೇಳಿಕೆ ನೀಡುವ ಬದಲು ಒಂದು ರೀತಿಯ ಬೀಸು ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಈಗಾಗಲೇ ಜನರಲ್ಲಿ ಬಹಳಷ್ಟು ಗೊಂದಲ, ಆತಂಕ, ಭಯ ಇರುವಾಗ ಕೊರೊನಾ ಲಸಿಕೆಗಳ ಅಡ್ಡಪರಿಣಾಮಗಳ ಬಗ್ಗೆ ಸರಿಯಾದ ಮಾಹಿತಿ ನೀಡದಿರುವುದು ಸರಿಯಲ್ಲ. ಪಾಶ್ಚಿಮಾತ್ಯ ದೇಶಗಳಲ್ಲಿ ಲಸಿಕೆ ಪಡೆದವರಲ್ಲಿ ಹೃದಯದ ಸಮಸ್ಯೆ ಹೆಚ್ಚಾಗುತ್ತಿದೆ ಎಂಬ ವರದಿಗಳು ಬಂದಿದೆ.
ಈ ಎಲ್ಲಾ ಗೊಂದಲಗಳ ನಡುವೆ ಹಠಾತ್ ಹೃದಯಾಘಾತಗಳು ಅಲ್ಲಲ್ಲಿ ಹೆಚ್ಚಿನವರಿಗೆ ಆಗುತ್ತಿರುವುದನ್ನು ಉತ್ಪ್ರೇಕ್ಷಿತವಾಗಿ ಮಾಧ್ಯಮ ವರದಿ ಮಾಡುತ್ತಿರುವುದು ಜನರನ್ನುಇನ್ನಷ್ಟು ಭಯ ಆತಂಕಕ್ಕೆ ದೂಡುತ್ತಿದೆ. ಇಂತಹ ಸಂದರ್ಭದಲ್ಲಿ ವೈದ್ಯರು ಹೇಳಿಕೆಗಳನ್ನು ಕೊಡುವಾಗ ವಿವೇಚನೆಯಿಂದ ವರ್ತಿಸಲಿ ಎಂದು ಡಾ.ಶ್ರೀನಿವಾಸ ಕಕ್ಕಿಲ್ಲಾಯ ಹೇಳಿದರು..
PublicNext
09/08/2023 02:01 pm