ಕಾರ್ಕಳ: ಪುರಾತತ್ವ ಇಲಾಖೆಯ ನಿರ್ಬಂಧಿತ ವಲಯದಲ್ಲಿ ಅಕ್ರಮ ಕಟ್ಟಡಗಳ ನಿರ್ಮಾಣದ ಬಗ್ಗೆ, ಪುರಾತತ್ವ ಇಲಾಖೆಯ ಆದೇಶಕ್ಕೆ ಡೋಂಟ್ ಕೇರ್ ಎನ್ನುವ ಶೀರ್ಷಿಕೆಯಡಿ ಪಬ್ಲಿಕ್ ನೆಕ್ಸ್ಟ್ ವರದಿ ಕುರಿತು ಕಾರ್ಕಳ ಪುರಸಭೆಯಲ್ಲಿ ಭಾರೀ ಚರ್ಚೆ ನಡೆಯಿತು.
ಕಾರ್ಕಳ ಪುರಸಭೆ ವ್ಯಾಪ್ತಿಯ ಅನಂತಪದ್ಮನಾಭ ದೇವಸ್ಥಾನದ ಬಳಿ ಪುರಾತತ್ವ ಇಲಾಖೆಯ ಅಧೀನದಲ್ಲಿರುವ ನಿಷೇಧಿತ ವಲಯದಲ್ಲಿ ಅಕ್ರಮ ಕಟ್ಟಡ ನಿರ್ಮಾಣವಾಗ್ತಿದೆ. ಇಲ್ಲಿ ಶೈಲಾ ಎನ್ ಪೈ ಹಾಗೂ ನಿತ್ಯಾನಂದ ಪೈ ಜಂಟಿ ಸಹಭಾಗಿತ್ವದಲ್ಲಿ ಪುರಸಭೆ ಅಥವಾ ಪುರಾತತ್ವ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ ಅಕ್ರಮವಾಗಿ ಕಟ್ಟಡ ನಿರ್ಮಾಣವಾಗುತ್ತಿದೆ ಎಂದು ಪುರಸಭಾ ಸದಸ್ಯ ಸೋಮನಾಥ್ ನಾಯಕ್ ಪಬ್ಲಿಕ್ ನೆಕ್ಸ್ಟ್ ವರದಿಯ ಕುರಿತು ವಿಷಯ ಪ್ರಸ್ತಾಪಿಸಿದರು.
ಪುರಸಭೆ ವ್ಯಾಪ್ತಿಯಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದರೂ ತಾವು ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಮುಖ್ಯ ಅಧಿಕಾರಿ ಅವರನ್ನು ಪ್ರಶ್ನಿಸಲಾಯ್ತು. ಇದಕ್ಕೆ ಉತ್ತರಿಸಿದ ಮುಖ್ಯ ಅಧಿಕಾರಿ ರೂಪ ಶೆಟ್ಟಿ ಅವರು, ಈಗಾಗಲೇ ಕಟ್ಟಡದ ಮಾಲೀಕರಿಗೆ ಕಾಮಗಾರಿ ಸ್ಥಗಿತಗೊಳಿಸುವಂತೆ ಹಲವು ಬಾರಿ ನೋಟಿಸ್ ನೀಡಲಾಗಿದೆ, ಆದರೂ ಅವರು ನಿರ್ಮಾಣವನ್ನು ಸ್ಥಗಿತಗೊಳಿಸಿಲ್ಲ ಎಂದರು.
ಇದರಿಂದ ಕೆರಳಿದ ಸೋಮನಾಥ ನಾಯಕ ಹಾಗಾದರೆ ಪುರಾತತ್ವ ಇಲಾಖೆಯ ಅಧಿಕಾರಿಯನ್ನು ಸಭೆಗೆ ಕರೆಯಿಸಿ ಅವರೇ ಉತ್ತರ ನೀಡಲಿ ಎಂದರು. ಆದರೆ ಇದಕ್ಕೆ ಮುಖ್ಯ ಅಧಿಕಾರಿಯವರು ಅಧಿಕಾರಿ ಅವರನ್ನು ನಾವು ಮುಖ್ಯ ಸಭೆಗೆ ಕರೆಯುವುದು ಸರಿಯಲ್ಲ ಎಂದರು. ಇದರಿಂದ ಕೆರಳಿದ ಸೋಮನಾಥ್ ನಾಯಕ್ ಅವರು ಅಕ್ರಮ ಕಟ್ಟಡಗಳು ನಿರ್ಮಾಣವಾದರೂ ನೀವು ನೋಟಿಸ್ ಕೊಟ್ಟು ಸುಮ್ಮನೆ ಇರುವಿರಾ ಎಂದು ಮರು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಮುಖ್ಯ ಅಧಿಕಾರಿಗಳು ತಾನು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಈ ಕುರಿತು ವರದಿ ನೀಡಿರುವುದಾಗಿ ಸ್ಪಷ್ಟಪಡಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸೋಮನಾಥ ನಾಯಕ್ ಅನುಮತಿ ಪಡೆಯದ ಕೆಲವು ಕಟ್ಟಡಗಳಿಗೆ ಪುರಸಭೆ ನೋಟಿಸ್ ನೀಡಿ ಕಾಮಗಾರಿ ಸ್ಥಗಿತಗೊಳಿಸುತ್ತದೆ. ಆದರೆ ಪ್ರಭಾವಿಗಳು ನಡೆಸುವ ಕಟ್ಟಡ ಕಾಮಗಾರಿಯನ್ನು ತಡೆಹಿಡಿಯಲು ಹಿಂದೇಟು ಹಾಕುತ್ತದೆ ಎಂದು ಪುರಸಭೆ ವೈಫಲ್ಯವನ್ನು ಬಿಚ್ಚಿಟ್ಟರು.
ಮುಂದಿನ ಸಾಮಾನ್ಯ ಸಭೆಯೊಳಗೆ ತನಗೆ ಉತ್ತರ ಬೇಕೆಂದು ಸೋಮನಾಥ್ ನಾಯಕ್ ಬಿಗಿ ಪಟ್ಟು ಹಿಡಿದರು. ಇದಕ್ಕೆ ಸ್ಪಷ್ಟನೆ ನೀಡಿದ ರೂಪ ಶೆಟ್ಟಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿ ಅವರಿಂದ ಉತ್ತರ ಪಡೆಯಲಾಗುವುದೆಂದು ಭರವಸೆ ನೀಡಿದರು.
Kshetra Samachara
26/08/2022 06:43 pm