ಸುಳ್ಯ: ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹಾಗೂ ಮಸೂದ್ ಹತ್ಯೆ ಪ್ರಕರಣದ ತನಿಖೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ, ಕಳೆದೆರಡು ವರ್ಷಗಳಿಂದ ಸುಳ್ಯ, ಕಡಬ, ಪುತ್ತೂರು ತಾಲೂಕುಗಳನ್ನು ಒಳಗೊಂಡ ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾಗಿ ಜನಪರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಗಾನಾ ಪಿ.ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಡಿವೈಎಸ್ಪಿ ಡಾ.ಗಾನಾ ಪಿ.ಕುಮಾರ್ ವರ್ಗಾವಣೆಯಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ಸಿಐಡಿಯಲ್ಲಿ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೀರಯ್ಯ ಹಿರೇಮಠ ಎಂಬುವರನ್ನು ಪುತ್ತೂರು ಉಪವಿಭಾಗದ ಡಿವೈಎಸ್ಪಿಯಾಗಿ ನೇಮಕಗೊಳಿಸಿ ಸರಕಾರ ಆದೇಶಿಸಿದೆ ಎಂದು ವರದಿಯಾಗಿದೆ. ಡಾ. ಗಾನಾ ಪಿ ಕುಮಾರ್ ಅವರು ಪುತ್ತೂರಿಗೆ ಆಗಮಿಸಿದ ನಂತರದಲ್ಲಿ ಹಲವಾರು ಕ್ಲಿಷ್ಟಕರ ಪ್ರಕರಣಗಳನ್ನು ಪತ್ತೆ ಹಚ್ಚಿದ್ದರು. ಹಲವಾರು ವರ್ಷಗಳಿಂದ ನೆಲ್ಯಾಡಿಯಲ್ಲಿ ನಡೆಯುತ್ತಿದ್ದ ಬೃಹತ್ ಆಯಿಲ್ ಮಿಕ್ಸ್ ದಂಧೆಗೆ ದಾಳಿ ನಡೆಸಿದ್ದರು. ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆ, ಹಾಗೂ ಮಹಮ್ಮದ್ ಮಸೂದ್ ಹತ್ಯಾ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ತನಿಖಾಧಿಕಾರಿಗಳೊಂದಿಗೆ ಮಹತ್ವದ ಪಾತ್ರ ವಹಿಸಿದ್ದರು.
ಡಿವೈಎಸ್ಪಿ ಗಾನಾ ಪಿ ಕುಮಾರ್ ಅವರ ವರ್ಗಾವಣೆ ಹಿನ್ನಲೆಯಲ್ಲಿ ಪುತ್ತೂರಿಗೆ ಪ್ರಾಯೋಗಿಕ ತರಬೇತಿ ಪೂರ್ಣಗೊಳಿಸಿ ಕೆಲವು ತಿಂಗಳ ಹಿಂದೆಯಷ್ಟೆ ಸಿಐಡಿಗೆ ತಾತ್ಕಾಲಿಕವಾಗಿ ನಿಯುಕ್ತಿಗೊಂಡಿದ್ದ ವೀರಯ್ಯ ಹಿರೇಮಠ ಅವರನ್ನು ಪುತ್ತೂರು ಉಪವಿಭಾಗದ ಡಿವೈಎಸ್ಪಿಯಾಗಿ ನೇಮಕಗೊಳಿಸಿ ಆದೇಶಿಸಲಾಗಿದೆ ಎಂದು ತಿಳಿದುಬಂದಿದೆ. ಡಿವೈಎಸ್ಪಿ ಡಾ.ಗಾನಾ ಪಿ.ಕುಮಾರ್ ಅವರನ್ನು ಸಿಐಡಿಗೆ ವರ್ಗಾವಣೆಗೊಳಿಸಿರುವ ಬಗ್ಗೆ ಮೊದಲು ಮಾಹಿತಿ ಬಂದರೂ ಪ್ರಸ್ತುತ ಅವರನ್ನು ಮಂಗಳೂರಿನ ಎಸ್ಪಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
Kshetra Samachara
22/08/2022 10:39 am