ಮಂಗಳೂರು: ದ.ಕ.ಜಿಲ್ಲೆಯ ಸರಣಿ ಹತ್ಯೆಗಳ ವಿಚಾರದಲ್ಲಿ ಸರಕಾರ ಮುಸ್ಲಿಂ ಸಮುದಾಯದ ವಿರುದ್ಧ ದ್ವಿಮುಖ ನೀತಿಯನ್ನು ತೋರಿಸುತ್ತಿದೆ. ತಕ್ಷಣ ಸರಕಾರ ತನ್ನ ತಾರತಮ್ಯ ನೀತಿಯನ್ನು ಕೈಬಿಟ್ಟು ಪ್ರಕರಣವನ್ನು ನ್ಯಾಯಯುತ ರೀತಿಯಲ್ಲಿ ತನಿಖೆ ನಡೆಸಲಿ. ತಕ್ಷಣ ಮಸೂದ್ ಹಾಗೂ ಫಾಝಿಲ್ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಘೋಷಣೆಯಾಗಲಿ. ಇಲ್ಲದಿದ್ದಲ್ಲಿ ಬೃಹತ್ ಪ್ರತಿಭಟನೆಯ ನಡೆಸಲಾಗುತ್ತದೆ ಎಂದು ಮುಸ್ಲಿಂ ಐಕ್ಯತಾ ವೇದಿಕೆ ಸುರತ್ಕಲ್ ವಲಯ ಆಗ್ರಹಿಸಿದೆ.
ನಗರದ ಸುರತ್ಕಲ್ ನ ಖಾಸಗಿ ಹೊಟೇಲ್ ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಸ್ಲಿಂ ಐಕ್ಯತಾ ವೇದಿಕೆ, ಹತ್ಯೆಯಾದ ಮೂವರಲ್ಲಿ ಪ್ರವೀಣ್ ನೆಟ್ಟಾರು ಕುಟುಂಬಸ್ಥರಿಗೆ ಸರಕಾರ 25 ಲಕ್ಷ ರೂ. ಪರಿಹಾರ ನೀಡಿದೆ. ಆತನ ಮನೆಗೆ ಸಿಎಂರಿಂದ ಹಿಡಿದು ರಾಜ್ಯದ ಗೃಹಮಂತ್ರಿ, ಸಚಿವರುಗಳು, ಶಾಸಕರು, ಸಂಸದರು ಭೇಟಿ ನೀಡುತ್ತಾರೆ. ಆದರೆ ಪ್ರವೀಣ್ ಮನೆಯಿಂದ ಕೇವಲ ಐದು ಕಿ.ಮೀ. ದೂರವಿರುವ ಮಸೂದ್ ಮನೆಗೆ ಹಾಗೂ ಸುರತ್ಕಲ್ ನ ಫಾಝಿಲ್ ಮನೆಗೆ ಯಾವುದೇ ಸರಕಾರದ ಜನಪ್ರತಿನಿಧಿಗಳು ಬಂದಿಲ್ಲ. ಅಲ್ಲದೆ ಈವರೆಗೆ ಯಾವುದೇ ಪರಿಹಾರವೂ ದೊರಕಿಲ್ಲ ಎಂದು ಹೇಳಿದೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ತನಿಖೆ ನಡೆಸಲು ಈಗಾಗಲೇ ಸರಕಾರ ಎನ್ಐಎಗೆ ಒಪ್ಪಿಸಿದೆ. ಆದರೆ ಫಾಝಿಲ್, ಮಸೂದ್ ಹತ್ಯೆ ಪ್ರಕರಣದಲ್ಲಿ ಕೆಲ ವ್ಯಕ್ತಿಗಳನ್ನು ಬಂಧಿಸಿ ಸುಮ್ಮನಾಗುವ ಕಾರ್ಯ ಆಗುತ್ತಿದೆ. ಆದ್ದರಿಂದ ಎನ್ ಐಎಗೆ ಮೂರು ಪ್ರಕರಣವನ್ನು ಒಪ್ಪಿಸಿ ಸರಿಯಾದ ತನಿಖೆಯಾಗಲಿ. ಇದಾಗದಿದ್ದಲ್ಲಿ ಮೂರು ಪ್ರಕರಣವನ್ನು ರಾಜ್ಯದ ಉನ್ನತ ಮಟ್ಟದ ಪೊಲೀಸ್ ಅಧಿಕಾರಿ ಅಥವಾ ನಿವೃತ್ತ ನ್ಯಾಯಾಧೀಶರ ತಂಡ ರಚಿಸಿ ಅವರುಗಳಿಗೆ ತನಿಖೆಗೊಪ್ಪಿಸಲಿ ಎಂದು ಮುಸ್ಲಿಂ ಐಕ್ಯತಾ ವೇದಿಕೆ ಆಗ್ರಹಿಸಿದೆ.
Kshetra Samachara
08/08/2022 10:27 pm