ಮಂಗಳೂರು: ದ.ಕ.ಜಿಲ್ಲೆಯ ಮತದಾರರು ತಮ್ಮ ಓಟರ್ ಐಡಿಗೆ ಆಧಾರ್ ಸಂಖ್ಯೆ ಜೋಡಿಸಿವಂತೆ ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಕರೆ ನೀಡಿದ್ದಾರೆ.
ದ.ಕ.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಚುನಾವಣಾ ಸುಧಾರಣೆಗಳು ಹಾಗೂ ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆ ಕುರಿತಂತೆ ಮಾತನಾಡಿ, ಕೇಂದ್ರದ ಚುನಾವಣಾ ಆಯೋಗದ ನಿರ್ದೇಶನದಂತೆ ಓಟರ್ ಐಡಿಗೆ ಕಡ್ಡಾಯವಾಗಿ ಆಧಾರ್ ನಂಬರ್ ಅನ್ನು ಜೋಡಣೆ ಮಾಡಬೇಕಿದೆ. ಅದರಂತೆ ಎಪಿಕ್ ಕಾರ್ಡ್ ಹೊಂದಿರುವ ಮತದಾರರು ತಮ್ಮ ಆಧಾರ್ ಸಂಖ್ಯೆಯನ್ನು ಮತದಾರರ ಗುರುತಿನ ಚೀಟಿಗೆ ಲಿಂಕ್ ಮಾಡಬೇಕು. ಪ್ರತಿಯೊಬ್ಬ ಮತದಾರರು ನಮೂನೆ 6-ಬಿಯಲ್ಲಿ ವೆಬ್‍ಸೈಟ್:www.nvsp.in ಮೂಲಕ ಅಥವಾ ವೋಟರ್ ಹೆಲ್ಪ್ ಲೈನ್ ಆ್ಯಪ್, ಗರುಡ ಆ್ಯಪ್ ಹಾಗೂ ಬೂತ್ ಮಟ್ಟದ ಅಧಿಕಾರಿಗೆ ಆಧಾರ್ ಸಂಖ್ಯೆ ನೀಡಿ ಚುನಾವಣಾ ಗುರುತಿನ ಚೀಟಿಗೆ ಅದನ್ನು ಜೋಡಣೆ ಮಾಡಬಹುದಾಗಿದೆ ಎಂದರು.
ಆಧಾರ್ ಕಾರ್ಡ್ ಇಲ್ಲದಿದ್ದ ಮತದಾರರು ನರೇಗಾ ಉದ್ಯೋಗ ಕಾರ್ಡ್, ಭಾವಚಿತ್ರ ಹೊಂದಿದ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‍ನ ಪಾಸ್ ಪುಸ್ತಕ, ಪ್ರಧಾನ ಮಂತ್ರಿ ಆರೋಗ್ಯ ವಿಮೆಯ ಸ್ಮಾರ್ಟ್ ಕಾರ್ಡ್, ವಾಹನ ಪರವಾನಿಗೆ, ಪಾನ್ ಕಾರ್ಡ್, ಆರ್.ಜಿ.ಐ ಹಾಗೂ ಎನ್.ಪಿ.ಆರ್‍ನ ಸ್ಮಾರ್ಟ್ ಕಾರ್ಡ್, ಭಾರತೀಯ ಪಾಸ್‍ಪೋರ್ಟ್, ಪಿಂಚಣಿ ದಾಖಲಾತಿ, ಸರ್ವಿಸ್ ಗುರುತಿನ ಚೀಟಿ, ಶಾಸಕ ಹಾಗೂ ಸಂಸದರಿಂದ ಪಡೆದ ಅಧೀಕೃತ ಗುರುತಿನ ಚೀಟಿ ಹಾಗೂ ಯು.ಡಿ.ಐ.ಡಿ ಕಾರ್ಡ್ ದಾಖಲೆಯನ್ನು ನೀಡಿ ಮತದಾರರ ಗುರುತಿನ ಚೀಟಿಗೆ ಲಿಂಕ್ ಮಾಡಬಹುದು ಎಂದು ಅವರು ಹೇಳಿದರು.
Kshetra Samachara
02/08/2022 06:12 pm