ಕಡಬ: ಸರ್ಕಾರದ ವಿವಿಧ ಯೋಜನೆಗಳಡಿ ಸವಲತ್ತು ಪಡೆಯಲು ಅರ್ಹರಿರುವ ಫಲಾನುಭವಿಗಳ ಮನೆ ಬಾಗಿಲಿಗೆ ಅಧಿಕಾರಿಗಳು, ಸಿಬ್ಬಂದಿ ಈ ಸೌಲಭ್ಯ ತಲುಪಿಸುವಂತೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಸೂಚಿಸಿದರು.
ಅವರು ಕಡಬ ತಾಲೂಕಿನ ಆಲಂಕಾರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ʼಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯʼ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮನೆ ಬಾಗಿಲಿಗೆ ತೆರಳಿ ಅರ್ಹ ಫಲಾನುಭವಿಗಳಿಗೆ ಅಗತ್ಯವಿರುವ ಸವಲತ್ತು ಒದಗಿಸಬೇಕು, ಗ್ರಾಮಲೆಕ್ಕಿಗರು, ಕಂದಾಯ ನಿರೀಕ್ಷಕರು, ತಹಶೀಲ್ದಾರ್ ಮತ್ತಿತರ ಅಧಿಕಾರಿಗಳು ನೇರವಾಗಿ ಫಲಾನುಭವಿಗಳೊಂದಿಗೆ ಮಾತನಾಡಬೇಕು ಎಂದರು.
ಗ್ರಾಮ ವಾಸ್ತವ್ಯ ವೇಳೆ ಸಲ್ಲಿಕೆಯಾಗುವ ಅರ್ಜಿಗಳ ಬಗ್ಗೆ ಪ್ರತಿ ತಿಂಗಳ 2ನೇ ಶನಿವಾರ ಅಪರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಪರಿಶೀಲನೆ ನಡೆಸಲಾಗುತ್ತದೆ, ನಂತರದಲ್ಲಿ ಸಹಾಯಕ ಆಯುಕ್ತರು ಆ ಗ್ರಾಮಕ್ಕೆ ತೆರಳಿ ಬಾಕಿ ಅರ್ಜಿಗಳ ಸ್ಥಿತಿಗತಿ ಹಾಗೂ ವಿಲೇವಾರಿಗೆ ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.
ನಂತರ ಜಿಲ್ಲಾಧಿಕಾರಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಮಧ್ಯಾಹ್ನ ಗ್ರಾಮದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ, ಸ್ಥಳೀಯರ ಸಮಸ್ಯೆ ಆಲಿಸಿದರು. ಸಚಿವ ಎಸ್. ಅಂಗಾರ, ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ತಹಶೀಲ್ದಾರ್ ಅನಂತ ಶಂಕರ್ ಇತರ ಗಣ್ಯರು ಉಪಸ್ಥಿತರಿದ್ದರು.
ಕುಮ್ಕಿ, ಕಾನ, ಬಾಣ ಹಕ್ಕುಗಳನ್ನು ನೀಡುವ ಕುರಿತಂತೆ ಸರ್ಕಾರದ ಮಟ್ಟದಲ್ಲಿ ಉಪ ಸಮಿತಿ ರಚಿಸಲಾಗಿದೆ. ಈ ಸಮಿತಿ ಮುಂದಿನ ವಾರ ಸಭೆ ಸೇರಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಸಚಿವ ಎಸ್. ಅಂಗಾರ ತಿಳಿಸಿದರು.
Kshetra Samachara
19/06/2022 10:24 pm