ಮಂಗಳೂರು: ದ.ಕ.ಜಿಲ್ಲೆಯಲ್ಲಿರುವ ಎಲ್ಲಾ ಜಲಮೂಲಗಳನ್ನು ಸಂರಕ್ಷಿಸುವ ಹಿನ್ನೆಲೆಯಲ್ಲಿ ಆ ಜಲ ಮೂಲಗಳನ್ನು ಜಿಯೋ ಟ್ಯಾಗಿಂಗ್‍ಗೆ ಒಳಪಡಿಸುವಂತೆ ಕೇಂದ್ರ ರಕ್ಷಣಾ ಸಚಿವಾಲಯದ ನಿರ್ದೇಶಕರೂ, ಜಲಶಕ್ತಿ ಅಭಿಯಾನದ ಕೇಂದ್ರದ ನೋಡಲ್ ಅಧಿಕಾರಿ ಪಿಯೂಷ್ ರಂಜನ್ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಉರ್ವಸ್ಟೋರ್ ನಲ್ಲಿರುವ ದ.ಕ.ಜಿಪಂ ಮಿನಿ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಲಶಕ್ತಿ ಅಭಿಯಾನದಲ್ಲಿ ಎಲ್ಲಾ ಜಲ ಮೂಲಗಳನ್ನು ಗುರುತಿಸಿ, ಅವುಗಳ ಸಂರಕ್ಷಣೆ ಮಾಡಲಾಗುತ್ತಿದೆ. ಇವುಗಳಲ್ಲಿ ಮಳೆ ನೀರು ಕೊಯ್ಲು ಮಹತ್ವದ ಪಾತ್ರ ವಹಿಸುತ್ತಿದೆ. ಮಳೆ ಎಲ್ಲಿ, ಯಾವ ಜಾಗದಲ್ಲಿ ಬೀಳುತ್ತದೆಯೋ ಆ ನೀರನ್ನು ಹಿಡಿದಿಡುವ ಧ್ಯೇಯ ಹೊಂದಿರುವ ಜಲಶಕ್ತಿ ಅಭಿಯಾನದಲ್ಲಿ ಜಲಶಕ್ತಿ ಮೂಲಗಳ ಸಂರಕ್ಷಣೆಯೂ ಅತ್ಯಂತ ಮಹತ್ವ ಪಡೆದಿದೆ. ದ.ಕ. ಜಿಲ್ಲೆಯಲ್ಲಿ ಪ್ರಸಕ್ತ ಇರುವ ಎಲ್ಲಾ ಜಲ ಮೂಲಗಳನ್ನು ಜಿಯೋ ಟ್ಯಾಂಗಿಗ್‍ಗೆ ಒಳಪಡಿಸುವಂತೆ ಅವರು ತಿಳಿಸಿದರು.
ಜಿಲ್ಲೆಯಲ್ಲಿ ಜಲಶಕ್ತಿ ಕೇಂದ್ರವೊಂದನ್ನು ಸ್ಥಾಪಿಸಬೇಕು. ಸಂಪೂರ್ಣವಾಗಿ ಜಿಲ್ಲೆಯ ಜಲ ಸಂರಕ್ಷಣಾ ಯೋಜನೆಯನ್ನು ರೂಪಿಸಬೇಕು. ಅಮೃತ ಸರೋವರ ಯೋಜನೆಯಡಿ ಒಂದು ಎಕರೆ ಪ್ರದೇಶದೊಳಗೆ ಲಭ್ಯವಿರುವ ಜಲ ಮೂಲಗಳನ್ನು ಪುನರುಜ್ಜೀವನಗೊಳಿಸುವಂತೆ ಅಥವಾ ಸಾಧ್ಯವಿದ್ದರೆ ಹೊಸ ಜಲಮೂಲಗಳನ್ನು ನಿರ್ಮಾಣ ಮಾಡಲು ಅಗತ್ಯ ಕ್ರಮವಹಿಸುವಂತೆ ಪೀಯೂಷ್ ರಂಜನ್ ಅಧಿಕಾರಿಗಳಿಗೆ ತಿಳಿಸಿದರು.
Kshetra Samachara
16/06/2022 08:17 pm