ಮುಲ್ಕಿ: ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದನೆ ನೀಡುವುದು ಗ್ರಾಮವಾಸ್ತವ್ಯದ ಮೂಲ ಉದ್ದೇಶವಾಗಿದ್ದು ಕಂದಾಯ ಇಲಾಖೆ ಹಾಗೂ ಗ್ರಾಮ ಪಂಚಾಯತ್ ಒಟ್ಟಾಗಿ ಕೆಲಸ ಮಾಡಿದರೆ ಮಧ್ಯವರ್ತಿಗಳಿಲ್ಲದೆ ಫಲಾನುಭವಿಗಳಿಗೆ ಸವಲತ್ತು ಸಿಗಲು ಸಾಧ್ಯ ಎಂದು ಮುಲ್ಕಿ ತಹಶೀಲ್ದಾರ್ ಗುರುಪ್ರಸಾದ್ ಹೇಳಿದರು. ಕರ್ನಾಟಕ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಅಭಿಯಾನದ ಅಂಗವಾಗಿ ಅತಿಕಾರಿ ಬೆಟ್ಟು ಗ್ರಾ.ಪಂ. ಸಭಾಭವನದಲ್ಲಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಅವರು, ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪಂಚಾಯತ್ ಅಧ್ಯಕ್ಷ ಮನೋಹರ್ ಕೋಟ್ಯಾನ್ ತನಾಡಿ ಪಂಚಾಯತಿ ವ್ಯಾಪ್ತಿಯಲ್ಲಿ ನಿವೇಶನರಹಿತರಿಗೆ ಸೂರು, ರುದ್ರಭೂಮಿ, ಆರೋಗ್ಯ ಕೇಂದ್ರ ರಸ್ತೆ ದುರಸ್ತಿ, ಕುಡಿಯುವ ನೀರು ಮೊದಲಾದ ಸಮಸ್ಯೆಗಳಿದ್ದು ನಿವಾರಣೆಗೆ ಪ್ರಯತ್ನಿಸಲಾಗುವುದು ಎಂದರು.
ಈ ಸಂದರ್ಭ ಪಂಚಾಯತ್ ಉಪಾಧ್ಯಕ್ಷೆ ಶಶಿಕಲಾ, ಅಭಿವೃದ್ಧಿ ಅಧಿಕಾರಿ ಪ್ರಕಾಶ್, ಪಂಚಾಯತ್ ಸದಸ್ಯರು,ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಬಳಿಕ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆದು ಗ್ರಾಮಸ್ಥರ ಸಮಸ್ಯೆಗಳನ್ನು ದಾಖಲಿಸಲಾಗಿ ಸೂಕ್ತ ಪರಿಹಾರ ಕಲ್ಪಿಸಲಾಯಿತು. ಸಭೆಯಲ್ಲಿ 38 ಜಾತಿ ಮತ್ತು ಆದಾಯ ಪತ್ರ, 8 ಪೆನ್ಷನ್ ಸಹಿತ ಅನೇಕ ಸೌಲಭ್ಯಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.
Kshetra Samachara
21/05/2022 03:34 pm