ಮುಲ್ಕಿ: ಮುಲ್ಕಿ ಸಮೀಪದ ಅತಿಕಾರಿಬೆಟ್ಟು ಗ್ರಾ.ಪಂ ವ್ಯಾಪ್ತಿಯ ಅತಿಕಾರಿ ಬೆಟ್ಟು ಹಾಗೂ ಶಿಮಂತೂರು ಗ್ರಾಮಗಳ ಗ್ರಾಮ ಸಭೆ ಗ್ರಾ.ಪಂ ಸಭಾಭವನದಲ್ಲಿ ನಡೆಯಿತು.
ಸಭೆಯಲ್ಲಿ ಆರೋಗ್ಯ ಇಲಾಖೆ ಬಗ್ಗೆ ಕೆಮ್ರಾಲ್ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚಿತ್ರ ಮಾತನಾಡಿ ಅತಿಕಾರಿಬೆಟ್ಟು ಗ್ರಾಪಂ ಆರೋಗ್ಯ ಉಪಕೇಂದ್ರಕ್ಕೆ ಪಂಚಾಯಿತಿ ಕಟ್ಟಡದಲ್ಲಿ ಚಾಲನೆ ನೀಡಲಾಗಿದೆ ,ಶೀಘ್ರವೇ ಶಿಮಂತೂರು ಗ್ರಾಮದಲ್ಲಿ ಆರೋಗ್ಯ ಕ್ಷೇಮ ಕೇಂದ್ರಕ್ಕೆ ಚಾಲನೆ ನೀಡಲಾಗುವುದು ಎಂದರು.
ಕಿನ್ನಿಗೋಳಿ ಕೃಷಿ ಕೇಂದ್ರದಲ್ಲಿ ಸಿಬ್ಬಂದಿಗಳು ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಗ್ರಾಮಸ್ಥ ದಿನೇಶ್ಚಂದ್ರ ಅಜಿಲ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಕೃಷಿ ಅಧಿಕಾರಿ ಅಬ್ದುಲ್ ಬಶೀರ್ ಮಾತನಾಡಿ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ಶೀಘ್ರವೇ ಮುಲ್ಕಿಯ ಕಾರ್ನಾಡ್ ನಲ್ಲಿ ನೂತನ ಕೃಷಿಕೇಂದ್ರ ಉದ್ಘಾಟನೆಗೊಳ್ಳಲಿದೆ ಎಂದು ಭರವಸೆ ನೀಡಿದರು.
ಶಿಮಂತೂರು ಗ್ರಾಮದಲ್ಲಿ ಜಲಜೀವನ್ ಗೆ ಮುರತಕಟ್ಟ ಪ್ರದೇಶದಲ್ಲಿ ಬಾವಿ ತೋಡಿದ್ದು ಸ್ಥಳೀಯ ಕೃಷಿಕರನ್ನು ಕಡೆಗಣಿಸಿ ಬೇರೆ ಕಡೆಗೆ ನೀರನ್ನು ಸರಬರಾಜು ಮಾಡುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಕಿಶೋರ್ ಶೆಟ್ಟಿ ಹಾಗೂ ದಿನೇಶ್ಚಂದ್ರ ಅಜಿಲ ಮಾತನಾಡಿ ತೋಡಿದ ಬಾವಿಯ ಮಣ್ಣು ಹಾಗೆ ಬಿಟ್ಟಿದ್ದು ಮಳೆ ಬಂದರೆ ಕೃಷಿಗೆ ತೊಂದರೆಯಾಗುವ ಸಾಧ್ಯತೆ ಇದೆ ಹಾಗೂ ಸ್ಥಳೀಯರಿಗೆ ಜಲಕ್ಷಾಮ ಭೀತಿ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಅತಿಕಾರಿಬೆಟ್ಟು ಗ್ರಾಮದ ಮಟ್ಟು ಹೊಸಕೊಪ್ಪಲ ಬಳಿ ಕಾಲುಸಂಕಕ್ಕೆ ಮೆಟ್ಟಿಲು ಇಲ್ಲದೆ ನಡೆದಾಡಲು ತೊಂದರೆಯಾಗಿದೆ ಎಂದು ಗ್ರಾಮಸ್ಥ ಸಾಧು ಅಂಚನ್ ಮಟ್ಟು ದೂರಿದರು.
ಪಂಜಿನಡ್ಕ ಮೈಲೊಟ್ಟು ರಸ್ತೆ ಹೊಂಡಮಯ ವಾಗಿದ್ದು ಶೀಘ್ರ ದುರಸ್ತಿಗೊಳಿಸುವಂತೆ ಗ್ರಾಮಸ್ಥ ಪುನೀತ್ ಕೃಷ್ಣ ಒತ್ತಾಯಿಸಿದರು.
ಗ್ರಾಮಸ್ಥ ರತ್ನಾಕರ ಮಂದಾಡಿ ಮಾತನಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಕೆಲ ಶ್ರೀಮಂತ ವರ್ಗದವರಿಗೆ ಬಿಪಿಎಲ್ ಕಾರ್ಡ್ ವಿತರಣೆಯಾಗಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ತೀರಾ ಬಡವರಿಗೆ ಬಿಪಿಎಲ್ ಕಾರ್ಡ್ ಮೂಲಕ ಸರಕಾರದ ಸವಲತ್ತುಗಳು ಸಿಗುವ ಹಾಗೆ ಮಾಡಬೇಕು ಎಂದು ಆಗ್ರಹಿಸಿದರು.
ಪಂಜಿನಡ್ಕ ಬಳಿ ಮನೆ ವ್ಯಾಜ್ಯ ನ್ಯಾಯಾಲಯದಲ್ಲಿ ಇರುವಾಗ ಬೆಳಕು ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದು ಹೇಗೆ? ಎಂದು ಗ್ರಾಮಸ್ಥ ದಿನೇಶ್ಚಂದ್ರ ಅಜಿಲ ಪ್ರಸ್ತಾಪಿಸಿ ಹಣ ಕೊಟ್ಟರೆ ಏನು ಬೇಕಾದರೂ ನಡೆಯುತ್ತದೆ ಎಂದು ಮೆಸ್ಕಾಂ ಇಲಾಖೆಯ ಅಧಿಕಾರಿ ವಿವೇಕಾನಂದ ರನ್ನು ತರಾಟೆಗೆ ತೆಗೆದುಕೊಂಡರು. ಪಂಚಾಯತ್ ವ್ಯಾಪ್ತಿಯ ನಡಿಕೊಪ್ಪಲ ಬಳಿ ಹಳೆ ವಿದ್ಯುತ್ ತಂತಿಯನ್ನು ಬದಲಾಯಿಸಬೇಕು ರತ್ನಾಕರ ಮಂದಾಡಿ ಆಗ್ರಹಿಸಿದರು.
ಪಂಚಾಯತ್ ವ್ಯಾಪ್ತಿಯ ರೈಲ್ವೆಗೇಟ್ ಬಳಿ ರಸ್ತೆ ಅವ್ಯವಸ್ಥೆ, ಶಿಮಂತೂರು ಗ್ರಾಮಕ್ಕೆ ಅಂಗನವಾಡಿ, ಸ್ವಚ್ಛ ಗ್ರಾಮ ಬಗ್ಗೆ ಚರ್ಚೆ ನಡೆಯಿತು.
ಪಂಚಾಯತ್ ಅಧ್ಯಕ್ಷ ಮನೋಹರ್ ಕೋಟ್ಯಾನ್ ಮಾತನಾಡಿ ಪಂಚಾಯತ ಅಭಿವೃದ್ಧಿಗೆ ಗ್ರಾಮಸ್ಥರ ಸಹಕಾರ ಮುಖ್ಯ, ತೀವ್ರ ಕೆಟ್ಟು ಹೋಗಿರುವ ಕಕ್ಕ, ಮಟ್ಟು ಬಾನೊಟ್ಟು ರಸ್ತೆಗೆ ಶಾಸಕರ ವಿಶೇಷ ಅನುದಾನದಲ್ಲಿ 3 ಕೋಟಿ ರೂಪಾಯಿ ಮಂಜೂರಾಗಿದ್ದು ಶೀಘ್ರ ಕಾಮಗಾರಿ ನಡೆಸಲಾಗುವುದು ಎಂದರು.
ನೋಡಲ್ ಅಧಿಕಾರಿಯಾಗಿ ಕ್ಷೇತ್ರ ಸಮನ್ವಯಾಧಿಕಾರಿ ನಾಗರಾಜ್, ಅಭಿವೃದ್ಧಿ ಅಧಿಕಾರಿ ಪ್ರಕಾಶ್, ಗ್ರಾಮಲೆಕ್ಕಿಗ ಯೋಗೀಶ್ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
Kshetra Samachara
11/04/2022 04:15 pm