ಮುಲ್ಕಿ: ಮುಲ್ಕಿ ಸಮೀಪದ ಕೊಲ್ನಾಡುವಿನಲ್ಲಿ ರಾಜ್ಯಮಟ್ಟದ ಕೃಷಿ ಮೇಳ ಕೃಷಿ ಸಿರಿ-2022 ಇದರ ಎರಡನೇ ದಿನ ದಿ. ರಾಮಕೃಷ್ಣ ಪೂಂಜಾ ವೇದಿಕೆಯಲ್ಲಿ ಜರುಗಿದ ಸಭಾ ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಕೇಮಾರು ಸಾಂದೀಪನಿ ಮಠದ ಈಶ ವಿಠಲದಾಸ ಸ್ವಾಮೀಜಿ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಬಳಿಕ ಕೇಮಾರು ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಿ, "ನಾವು ಸಾಧ್ಯವಾದರೆ ಒಬ್ಬರ ದುಃಖವನ್ನು ಕಮ್ಮಿ ಮಾಡಬೇಕು. ಯಾರ ಖುಷಿಯನ್ನೂ ಕಿತ್ತುಕೊಳ್ಳಬಾರದು. ನಾವು ಐಟಿ ಬಿಟಿ ಕ್ಷೇತ್ರದಲ್ಲಿ ಸಾಕಷ್ಟು ಮುಂದಿದ್ದೇವೆ. ಆದರೆ ಅದರಿಂದ ಹೊಟ್ಟೆ ತುಂಬಿಸಲಾಗುವುದಿಲ್ಲ. ನಮ್ಮ ಹೊಟ್ಟೆ ತುಂಬಿಸಬೇಕಾದರೆ ಒಂದು ಹಿಡಿ ಅನ್ನ ಬೇಕು. ರಾಜಕಾರಣಿಗೆ ಎಸಿ ಕಾರ್, ಗನ್ ಮ್ಯಾನ್, ಎಸ್ಕಾರ್ಟ್ ಅನ್ನು ನಮ್ಮ ದೇಶದಲ್ಲಿ ನೀಡಲಾಗುತ್ತದೆ. ಅದರ ಬದಲು ದೇಶದ ರೈತರಿಗೆ ಅಂತಹ ಸವಲತ್ತು ನೀಡುವಂತಾಗಬೇಕು ಎಂದರು.
ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಮಾತನಾಡಿದರು. ವೇದಿಕೆಯಲ್ಲಿ ಗಣ್ಯರ ಸಮ್ಮುಖದಲ್ಲಿ ಕೃಷಿ ಆವಿಷ್ಕಾರದಲ್ಲಿ ಸಾಧನೆ ಮಾಡಿರುವ ಗಣಪತಿ ಭಟ್ ಎಸ್. ಕೆ. ಬಂಟ್ವಾಳ, ಜೇನು ಕೃಷಿಯಲ್ಲಿ ಸುಧಾಕರ್ ಪೂಜಾರಿ ಕೇಪು, ಕೃಷಿ ಆವಿಷ್ಕಾರದಲ್ಲಿ ಚಂದ್ರಶೇಖರ ಆಚಾರ್ಯ ಕೋಟೇಶ್ವರ, ಹೈನುಗಾರಿಕೆಯಲ್ಲಿ ಹರಿಕೃಷ್ಣ ತೋಡಿನ್ನಾಯ ಕಿನ್ನಿಗೋಳಿ, ಕೃಷಿ ಆವಿಷ್ಕಾರದಲ್ಲಿ ಸಾಧನೆ ಮಾಡಿರುವ ಕಾಳಪ್ಪ ಪಿರಿಯಾಪಟ್ಟಣ ರವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು, ಕೃಷಿ ಮೇಳದ ಅಧ್ಯಕ್ಷ ವಿಜಯ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನಿತೇಶ್ ಶೆಟ್ಟಿ ಎಕ್ಕಾರ್ ನಿರೂಪಿಸಿದರು.
Kshetra Samachara
12/03/2022 10:50 pm