ಮಂಗಳೂರು: ಪಚ್ಚನಾಡಿ ತ್ಯಾಜ್ಯ ದುರಂತದ ಸಂತ್ರಸ್ತರಿಗೆ ಮಂಗಳೂರು ಮನಪಾ ವತಿಯಿಂದ ಮಧ್ಯಂತರ ಪರಿಹಾರವನ್ನು ಇಂದು ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ನೀಡಲಾಯಿತು.
ಜಿಲ್ಲಾ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಶಿಲ್ಪಾ ಜಿ.ಯವರ ನೇತೃತ್ವದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಪಚ್ಚನಾಡಿ ತ್ಯಾಜ್ಯ ದುರಂತದ 47 ಮಂದಿ ಸಂತ್ರಸ್ತರನ್ನು ಪಟ್ಟಿ ಮಾಡಿ ಅವರ ದಾಖಲೆಗಳನ್ನು ಪರಿಶೀಲಿಸಿ ಪರಿಹಾರ ವಿತರಣೆ ಮಾಡಿದೆ. ಪರಿಹಾರದ ಹಣ ಸಂತ್ರಸ್ತರ ಬ್ಯಾಂಕ್ ಖಾತೆಗೆ ನಾಳೆ ನೇರವಾಗಿ ಜಮಾವಣೆಯಾಗಲಿದೆ.
ಈ ಬಗ್ಗೆ ಜಿಲ್ಲಾ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಶಿಲ್ಪಾ ಜಿ. ಮಾತನಾಡಿ, ಪಚ್ಚನಾಡಿ ತ್ಯಾಜ್ಯ ದುರಂತದ ಬಗ್ಗೆ ಪರಿಶೀಲನೆ ನಡೆಸಿ ರಾಜ್ಯ ಕಾನೂನು ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ತಕ್ಷಣ ಅವರು ಉಚ್ಚನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಮೇರೆಗೆ ರಿಟ್ ಪಿಟಿಷನ್ ಸಲ್ಲಿಸಿ ದ್ದರು. ಪ್ರಕರಣವನ್ನು ಕೈಗೆತ್ತಿಕೊಂಡ ಉಚ್ಚನ್ಯಾಯಾಲಯ ಈ ಬಗ್ಗೆ ವಿಚಾರಣೆ ನಡೆಸಿ ಸಂತ್ರಸ್ತರಿಗೆ ಕೂಡಲೇ ಪರಿಹಾರ ಒದಗಿಸಬೇಕೆಂದು ಮಂಗಳೂರು ಮನಪಾಕ್ಕೆ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಇಂದು ಮಧ್ಯಂತರ ಪರಿಹಾರ ನೀಡಲಾಗುತ್ತದೆ.
ಮಂಗಳೂರು ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಮಾತನಾಡಿ, ಈವರೆಗೆ ನಾವು ಸಂತ್ರಸ್ತರಿಗೆ ಬೆಳೆಹಾನಿ ಪರಿಹಾರವಾಗಿ 2.70 ಕೋಟಿ ರೂ. ನೀಡಿದ್ದೇವೆ. ಇಂದು ಮಧ್ಯಂತರ ಪರಿಹಾರವಾಗಿ 47 ಮಂದಿ ಸಂತ್ರಸ್ತ ಕುಟುಂಬಕ್ಕೆ 14 ಕೋಟಿ ರೂ. ನೀಡಲು ಉದ್ದೇಶಿಸಲಾಗಿದೆ. ಆದರೆ ದಾಖಲೆಗಳು ಸರಿಯಿರುವ ಸಂತ್ರಸ್ತರಿಗೆ ಮಾತ್ರ ಪರಿಹಾರ ನೀಡಲಾಗುತ್ತದೆ ಎಂದು ಹೇಳಿದರು.
ಸಂತ್ರಸ್ತ ಕರುಣಾಕರ ಮಾತನಾಡಿ, ಕೃಷಿಯೇ ಉದ್ಯೋಗವಾಗಿರುವ ನಮಗೆ ಬೇರೆ ಉದ್ಯೋಗವಿಲ್ಲ. ನಾವು ಕೃಷಿ ಮಾಡುತ್ತಿದ್ದ ಭೂಮಿ ಕಸದರಾಶಿಯಡಿ ಹುದುಗಿಹೋಗಿದೆ. ಇಂದು ನಮಗೆ ಮಧ್ಯಂತರ ಪರಿಹಾರ ದೊರಕಿದೆ. ಆದರೆ ಹಿರಿಯರಿಂದ ದೊರಕಿರುವ ಭೂಮಿಯನ್ನು ಮತ್ತೆ ಕೃಷಿಯೋಗ್ಯವಾಗಿ ಮನಪಾ ಪರಿವರ್ತನೆ ಮಾಡಿದಲ್ಲಿ ಮತ್ತೆ ಕೃಷಿಮಾಡಿಯೇ ನಮಗೆ ಜೀವನ ಸಾಗಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
Kshetra Samachara
11/02/2021 04:42 pm