ರಾಜ್ಯ ಕರಾವಳಿಯ 8030 ಯಾಂತ್ರೀಕೃತ ನಾಡದೋಣಿ ಮೀನುಗಾರರಿಗೆ ಎರಡು ತಿಂಗಳ ನಿಷೇಧಿತ ಅವಧಿಯನ್ನು ಹೊರತುಪಡಿಸಿ ವರ್ಷದಲ್ಲಿ 10 ತಿಂಗಳು ಮಾಸಿಕ 300 ಲೀಟರ್‌ನಂತೆ ಸೀಮೆಎಣ್ಣೆ ವಿತರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದನ್ನು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಆಗಸ್ಟ್ ಅಂತ್ಯದೊಳಗೆ ಅನುಷ್ಠಾನಗೊಳಿಸಬೇಕು ಎಂದು ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟ ರಾಜ್ಯಾಧ್ಯಕ್ಷ ಆನಂದ ಖಾರ್ವಿ ಉಪ್ಪುಂದ ಆಗ್ರಹಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2013ರಲ್ಲಿ ಮೀನುಗಾರಿಕೆ ಇಲಾಖೆಯ ವ್ಯಾಪ್ತಿಗೆ ಒಳಪಡುವ ನಾಡದೋಣಿ ಮೀನುಗಾರರಿಗೆ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ, ಉತ್ತರ ಕನ್ನಡ 990, ದಕ್ಷಿಣ ಕನ್ನಡ 2610, ಉಡುಪಿ 914 ಸೇರಿ ಒಟ್ಟು 4514 ನಾಡದೋಣಿಗಳಿಗೆ ಪ್ರತಿ ತಿಂಗಳಿಗೆ ತಲಾ 300 ಲೀಟರ್ ಸಬ್ಸಿಡಿಯುಕ್ತ ಸೀಮೆ ಎಣ್ಣೆ ಪ್ರತಿ ಲೀಟರ್‌ಗೆ 16.50 ರೂ. ದರದಲ್ಲಿ ವಿತರಿಸಲು ಆದೇಶ ನೀಡಲಾಗಿತ್ತು.
ಪ್ರಸ್ತುತ ದ.ಕ.- 1345, ಉಡುಪಿ 4896, ಉ.ಕ. 1789 ಸೇರಿ ಒಟ್ಟು 8030 ಪರವಾನಗಿ ಪಡೆದ ದೋಣಿಗಳಿದ್ದು, ಸೀಮೆಎಣ್ಣೆ ವಿತರಣೆಯಲ್ಲಿ ಏರಿಕೆ ಆಗಿಲ್ಲ. ಪ್ರಸ್ತುತ ಚಾಲನೆಯಲ್ಲಿರುವ ಮೀನುಗಾರಿಕೆ ನಾಡದೋಣಿಗಳಿಗೆ ಅನುಗುಣವಾಗಿ ಪ್ರತಿ ತಿಂಗಳು ಪ್ರತಿ ದೋಣಿಗೆ 300 ಲೀಟರ್‌ನಂತೆ ವಾರ್ಷಿಕ ಒಟ್ಟು 24090 ಕೆ.ಎಲ್.ಸೀಮೆಎಣ್ಣೆ ಅವಶ್ಯವಿದೆ. ಬೇಡಿಕೆಗೆ ಸ್ಪಂದಿಸಿರುವ ರಾಜ್ಯ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
PublicNext
09/08/2022 05:50 pm