ಕುಂದಾಪುರ: ಮಹಾತ್ಮ ಗಾಂಧೀಜಿ ದೇಶ ಕಂಡ ಮಹಾನ್ ನಾಯಕ. ಸ್ವಾತಂತ್ರ್ಯ ಹೋರಾಟದೊಂದಿಗೆ ಮಹಿಳೆಯರ ಸ್ವಾತಂತ್ರ್ಯ, ಅಸ್ಪೃಶ್ಯತೆ ಹೋಗಲಾಡಿಸುವ ನಿಟ್ಟಿನಲ್ಲಿಯೂ ಹೋರಾಡಿದ್ದರು. ಅವರ ಜೀವನ ಶೈಲಿ, ಸಿದ್ಧಾಂತವಾದ ಮಾಡು ಇಲ್ಲವೇ ಮಡಿ ಎನ್ನುವ ಸಂದೇಶದ ಮೂಲಕ ಪ್ರೇರಣೆಯಾಗಿದ್ದು, ಇದನ್ನೆಲ್ಲ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ. ನಾವು ಮಾಡುವ ಕೆಲಸ ಪ್ರಾಮಾಣಿಕವಾಗಿರಲಿ ಎಂದು ಪುರಸಭಾಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ ಹೇಳಿದರು.
ಅವರು ರವಿವಾರ ಇಲ್ಲಿನ ಗಾಂಧೀ ಪಾರ್ಕಿನಲ್ಲಿ ಕುಂದಾಪುರ ಪುರಸಭೆ, ರೋಟರಿ ಕ್ಲಬ್ ಕುಂದಾಪುರ, ರೋಟರಿ ಸನ್‌ರೈಸ್, ವಿದ್ಯುತ್ ಗುತ್ತಿಗೆದಾರರ ಸಂಘ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಗಾಂಽ ಜಯಂತಿ ಪ್ರಯುಕ್ತ ಗಾಂಧೀ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಉದ್ಘಾಟಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಜಿ.ಕೆ. ಮಾತನಾಡಿ, ಸ್ವಚ್ಛತೆಯಲ್ಲಿ ಕುಂದಾಪುರ ನಗರವೂ ರಾಜ್ಯಕ್ಕೆ ಮಾದರಿಯಾಗಿದ್ದು, ಅ ನೆಲೆಯಲ್ಲಿ ನಮ್ಮ ಪೌರ ಕಾರ್ಮಿಕರ ಶ್ರಮ ಶ್ಲಾಘನೀಯ ಎಂದರು. ಲಾಲ್ ಬಹಾದ್ದೂರ್ ಶಾಸ್ತ್ರಿ ಹಾಗೂ ಮಹಾತ್ಮ ಗಾಂಧೀಜಿ ಅವರು ದೇಶಕ್ಕೆ ಸಲ್ಲಿಸಿದ ಸೇವೆ, ಅವರು ಪಾಲಿಸಿದ ಜೀವನಶೈಲಿ ನಮಗೆ ಮಾದರಿ ಎಂದು ಪುರಸಭೆ ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ ಹೇಳಿದರು.
ರೋಟರಿ ಕ್ಲಬ್ ಪೂರ್ವಾಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಮಾತನಾಡಿ, ಗಾಂಧೀ ತತ್ವ, ಸಿದ್ಧಾಂತವನ್ನು ಯುವ ಸಮೂಹಕ್ಕೆ ತಿಳಿಸುವ ಕೆಲಸವಾಗಬೇಕು ಎಂದರು.
ಇದಕ್ಕೂ ಮೊದಲು ಫೆರ್ರಿ ಪಾರ್ಕಿನಲ್ಲಿ ಪುರಸಭೆ ವತಿಯಿಂದ ಲಾಲ್ ಬಹಾದ್ದೂರ್ ಶಾಸ್ತ್ರೀಜಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಲಾಯಿತು.
ರೋಟರಿ ಝೋನಲ್ ಲೆಫ್ಟಿನೆಂಟ್ ಪೂರ್ಣಿಮಾ ಭವಾನಿ ಶಂಕರ್ ಮಾತನಾಡಿದರು. ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಸಂದೀಪ್ ಖಾರ್ವಿ, ಮುಖ್ಯಾಧಿಕಾರಿ ಕೆ. ಗೋಪಾಲಕೃಷ್ಣ ಶೆಟ್ಟಿ, ಸದಸ್ಯರಾದ ಶೇಖರ್ ಪೂಜಾರಿ, ವಿ. ಪ್ರಭಾಕರ, ಅಬು ಮಹಮ್ಮದ್, ಸಂತೋಷ್ ಶೆಟ್ಟಿ, ರಾಘವೇಂದ್ರ ಖಾರ್ವಿ, ದಿವಾಕರ ಕಡ್ಗಿ, ಪ್ರಕಾಶ್ ಖಾರ್ವಿ, ರತ್ನಾಕರ್, ಸಿಬ್ಬಂದಿ, ರೋಟರಿ ಅಧ್ಯಕ್ಷ ವೆಂಕಟೇಶ್ ನಾವುಂದ, ಕಾರ್‍ಯದರ್ಶಿ ನಾಗರಾಜ್ ಶೆಟ್ಟಿ, ಪೂರ್ವಾಧ್ಯಕ್ಷರಾದ ಅಶಕ್, ಮನೋಜ್ ನಾಯರ್, ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಪೌರ ಕಾರ್ಮಿಕರು, ಸಾರ್ವಜನಿಕರು ಉಪಸ್ಥಿತರಿದ್ದರು.
Kshetra Samachara
02/10/2022 05:53 pm