ಹತ್ಯೆಯಾದವರು ಯಾವ ಧರ್ಮದವರಾಗಿರಲಿ ಪೊಲೀಸ್ ತನಿಖೆ ಒಂದೇ ರೀತಿ ನಡೆಯುತ್ತದೆ. ದ.ಕ. ಜಿಲ್ಲೆಯ ಸರಣಿ ಹತ್ಯೆಯ ತನಿಖೆ ಸಂಪೂರ್ಣವಾದ ಬಳಿಕ ಆರೋಪಿಗಳು ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದಾರೆಯೇ ಎಂಬುದನ್ನು ಚಾರ್ಜ್ ಶೀಟ್ ನಲ್ಲಿ ತಿಳಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ ಎಂದು ಡಿಜಿ ಪ್ರವೀಣ್ ಸೂದ್ ಹೇಳಿದರು.
ದ.ಕ.ಜಿಲ್ಲೆ ನಡೆದಿರುವ ಸರಣಿ ಹತ್ಯೆಯ ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರ್, ಎಸ್ಪಿಯವರಲ್ಲಿ ಚರ್ಚಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವೊಂದು ಸೂಕ್ಷ್ಮ ಪ್ರಕರಣಗಳಲ್ಲಿ ಅದೇ ವ್ಯಾಪ್ತಿಯ ಠಾಣಾ ಪೊಲೀಸರು ತನಿಖೆ ನಡೆಸಬೇಕೆಂದೇನಿಲ್ಲ. ಕಾನ್ ಸ್ಟೇಬಲ್ ನಿಂದ ಹಿಡಿದು, ಎಜಿಡಿಪಿ ತನಕ ಪ್ರಕರಣ ಬೇಧಿಸುವಲ್ಲಿ ಎಲ್ಲರ ಪಾತ್ರವಿರುತ್ತದೆ ಎಂದು ಅವರು ಹೇಳಿದರು.
ಕೃತ್ಯ ನಡೆಸೋದು ಸುಲಭ. ಪ್ರಕರಣ ಬೇಧಿಸೋದು ಅಷ್ಟೊಂದು ಸುಲಭದ ಕಾರ್ಯವಲ್ಲ. ತನಿಖೆ ಸರಿಯಾಗಿ ನಡೆಸಿದ್ದಲ್ಲಿ ಯಾವುದೂ ಕಷ್ಟವಲ್ಲ. ಕಾನೂನು ರೀತ್ಯ ತನಿಖೆ ನಡೆಸಿ ಸಾಕ್ಷಿಯೊಂದಿಗೆ ಪ್ರಕರಣವನ್ನು ಬೇಧಿಸುತ್ತೇವೆ. ಪ್ರತಿಯೊಂದು ಪ್ರಕರಣಗಳೂ ಭಿನ್ನವಾಗಿರುತ್ತದೆ. ಆದರೆ ದ.ಕ.ಜಿಲ್ಲೆಯ ಮೂರೂ ಹತ್ಯೆ ಪ್ರಕರಣವನ್ನು ಸರಿಯಾಗಿ ತನಿಖೆ ನಡೆಸಿ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಮಾಡಲಾಗುತ್ತದೆ ಎಂದು ಪ್ರವೀಣ್ ಸೂದ್ ಹೇಳಿದರು.
PublicNext
01/08/2022 04:16 pm