ವರದಿ: ರಹೀಂ ಉಜಿರೆ, ಪಬ್ಲಿಕ್ ನೆಕ್ಸ್ಟ್
ಬೈಂದೂರು: ಬಿತ್ತನೆ ಬೀಜ ಮತ್ತು ಗೊಬ್ಬರ ವಿತರಣೆ ವಿಚಾರದಲ್ಲಿ ಇಲಾಖೆಯ ಅಧಿಕಾರಿಗಳು ರೈತರನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಇವತ್ತು ಬೈಂದೂರಿನಲ್ಲಿ ನಡೆದಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೃಷಿ ಇಲಾಖೆ ಕಚೇರಿಯಲ್ಲಿ ಕೇವಲ ಒಂದು ಕಂಪ್ಯೂಟರ್ ಇದೆ. ಇನ್ನು ಪದೇ ಪದೇ ಕೈಕೊಡುವ ಸರ್ವರ್ ನಿಂದಾಗಿ ಬಿತ್ತನೆ ಬೀಜ ಮತ್ತು ಗೊಬ್ಬರಕ್ಕೆ ಬಂದ ಕೃಷಿಕರ ತಾಳ್ಮೆಯ ಕಟ್ಟೆಯೊಡೆದಿದೆ.
ಈ ಭಾಗದ ರೈತರು , ಇವತ್ತು ಬೆಳಗ್ಗೆಯೇ ಕಚೇರಿಗೆ ಆಗಮಿಸಿದ್ದರು. ಮಳೆಯಲ್ಲೇ ಸರತಿ ಸಾಲಿನಲ್ಲಿ ನಿಂತಿದ್ದರೂ ಅಧಿಕಾರಿಗಳು ಕ್ಯಾರೇ ಎನ್ನಲಿಲ್ಲ. ಇಲಾಖೆಯ ಮುಂಭಾಗ ಮಳೆಯಲ್ಲೇ 800 ಕ್ಕೂ ಹೆಚ್ಚು ರೈತರು ಕಾದು ಸುಸ್ತಾದರು. ಒಂದೇ ಕಂಪ್ಯೂಟರ್ ಇದ್ದರೂ , ಒಂದೇ ದಿನದಲ್ಲಿ ಬಿತ್ತನೆ ಬೀಜ ಮತ್ತು ಗೊಬ್ಬರ ವಿತರಣೆಗೆ ಮುಂದಾದ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು. ಈ ಭಾಗದ ರೈತರು ಹೇಳುವ ಪ್ರಕಾರ, ಮೇ ತಿಂಗಳಲ್ಲೇ ಕೃಷಿ ಚಟುವಟಿಕೆ ಪ್ರಾರಂಭಿಸಿದ್ದೇವೆ. ಹೀಗಿರುವಾಗ ಈ ಮೊದಲೇ ವಿತರಿಸಬೇಕಿತ್ತು. ಇವತ್ತು ಒಂದು ದಿನ ನಿಗಧಿ ಮಾಡಲಾಗಿದೆ. ಬೇರೆ ದಿನ ಇಲ್ಲವೇ? ಅದೂ ಅಲ್ಲದೇ ಸಾವಿರ ಜನಕ್ಕೆ ಒಂದೇ ದಿನ ವಿತರಿಸುತ್ತೇವೆ ಎಂಬ ಹಠ ಅಧಿಕಾರಿಗಳಿಗೆ ಯಾಕೆ ಎಂದು ಕೃಷಿಕರು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
Kshetra Samachara
19/05/2022 07:09 pm