ಮಂಗಳೂರು: ಶ್ರೀಕ್ಷೇತ್ರ ಕುದ್ರೋಳಿಯಲ್ಲಿ ನಡೆಯುವ ಅದ್ದೂರಿ ಮಂಗಳೂರು ದಸರಾ - 2022 ಮಹೋತ್ಸವಕ್ಕೆ ಸೆ.26ರಂದು ಬೆಳಗ್ಗೆ 11.15ಕ್ಕೆ ಕೇಂದ್ರದ ಮಾಜಿ ಸಚಿವ, ಶ್ರೀಕ್ಷೇತ್ರ ಕುದ್ರೋಳಿಯ ಅಭಿವೃದ್ಧಿಯ ರೂವಾರಿ ಜನಾರ್ದನ ಪೂಜಾರಿ ಅವರು ಚಾಲನೆ ನೀಡಲಿದ್ದಾರೆ.
ಶ್ರೀಕ್ಷೇತ್ರ ಕುದ್ರೋಳಿಯ ಅಧ್ಯಕ್ಷ ಎಚ್.ಎಸ್. ಸಾಯಿರಾಂ ಅವರು ಮಾಹಿತಿ ನೀಡಿ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಮಂಗಳೂರು ದಸರಾ ಮಹೋತ್ಸವವು ಸೆ.26ರಿಂದ ಆರಂಭಗೊಂಡು ಅ.6ರವರೆಗೆ ನಾನಾ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವೈಭವದಿಂದ ನಡೆಯಲಿದೆ ಎಂದು ತಿಳಿಸಿದ್ದಾರೆ.
ಅ.5ರಂದು ಸಂಜೆ 4ಕ್ಕೆ ವಿಸರ್ಜನಾ ಪೂಜೆ ನಡೆದು ಕುದ್ರೋಳಿ ಕ್ಷೇತ್ರದಿಂದ ಅಭೂತಪೂರ್ವವಾದ ಮಂಗಳೂರು ದಸರಾ ಬೃಹತ್ ಶೋಭಾಯಾತ್ರೆ ಆರಂಭವಾಗಲಿದೆ. ಈ ಮೆರವಣಿಗೆಗೆ ರಾಜ್ಯದ ನಾನಾ ಕಡೆಯಿಂದ ಆಗಮಿಸಿ ಕಲಾತಂಡಗಳು, ಹುಲಿವೇಷ ಹಾಗೂ ಇತರ ವೇಷದ ಟ್ಯಾಬ್ಲೋಗಳು, ವೇಷಭೂಷಣಗಳು, ಚೆಂಡೆ ತಂಡಗಳು ಮೆರುಗು ನೀಡಲಿದೆ ಎಂದರು.
ಶ್ರೀಕ್ಷೇತ್ರ ಕುದ್ರೋಳಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಮಾತನಾಡಿ, 500ಕ್ಕೂ ಅಧಿಕ ವಾಹನ ಪಾರ್ಕಿಂಗ್ (ಬಾಕ್ಸ್) ದಸರಾ ಮಹೋತ್ಸವ ಮೆರವಣಿಗೆಗೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಶ್ರೀ ಕ್ಷೇತ್ರದ ಪಾರ್ಕಿಂಗ್ ವ್ಯವಸ್ಥೆ ಮಾತ್ರವಲ್ಲದೆ ಒಟ್ಟು 7ಕಡೆಗಳಲ್ಲಿ 500ಕ್ಕೂ ಅಧಿಕ ವಾಹನಗಳಿಗೆ ಪಾರ್ಕಿಂಗ್ ಮಾಡುವಷ್ಟು ವ್ಯವಸ್ಥೆಯನ್ನು ಕ್ಷೇತ್ರದ ಭಕ್ತಾದಿಗಳಿಂದ ಸಹಕಾರದಿಂದ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
Kshetra Samachara
25/09/2022 02:47 pm