ಉಡುಪಿ : ಸ್ವಾತಂತ್ರ್ಯೋತ್ಸವ ಪ್ರತಿಯೊಬ್ಬ ಭಾರತೀಯನ ಪಾಲಿಗೆ ಅತ್ಯಂತ ಮಹತ್ವದ ದಿನ. ಸ್ವಾತಂತ್ರ್ಯವೆಂದರೆ ಸ್ವಚ್ಛಂದವಲ್ಲ. ಇನ್ನೊಬ್ಬರ ಸ್ವಾತಂತ್ರ್ಯವನ್ನು ಗೌರವಿಸುವವನು ಮಾತ್ರ ತನ್ನ ಸ್ವಾತಂತ್ರಕ್ಕಾಗಿ ಹಕ್ಕು ಮಂಡಿಸಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಹೇಳಿದರು.
ಅಜ್ಜರಕಾಡು ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ರಾಷ್ಟ್ರಧ್ವಜಾರೋಹಣ ಬಳಿಕ ಮಾತನಾಡಿದ ಸಚಿವರು, ಸ್ವಾತಂತ್ರ ಸಂಗ್ರಾಮದ ಸಮಯದಲ್ಲಿ ಬದುಕಿನ ಆಸೆ, ಆಕಾಂಕ್ಷೆಗಳನ್ನು ಬದಿಗೊತ್ತಿ ಸಮರ್ಪಣಾ ಭಾವದಿಂದ ಭಾರತ ಮಾತೆಯ ದಾಸ್ಯದ ವಿಮೋಚನೆಗಾಗಿ ಶ್ರಮಿಸಿದ ನಮ್ಮ ಪೂರ್ವಜರ ಯಶೋಗಾಥೆ ಇಂದಿನ ತಲೆಮಾರಿಗೆ ದಾರಿದೀಪ. ಯುವಜನರು ಅವುಗಳನ್ನು ತಿಳಿಯುವ ಮೂಲಕ ಸ್ವಾತಂತ್ರ್ಯದ ಮೌಲ್ಯವನ್ನು ಅರ್ಥಮಾಡಿಕೊಳ್ಳಬೇಕು.
ದೇಶದ ಪರಂಪರೆಯನ್ನು ಗಮನಿಸಿದರೆ ಭಾರತ ಸರ್ವಸಮೃದ್ಧ ದೇಶವಾಗಿತ್ತು. ವಿಶ್ವದ ಎಲ್ಲ ನಾಗರಿಕತೆಗಳ ಮಂಚೂಣಿಯಲ್ಲಿ ಭಾರತ ಸ್ಥಾನ ಪಡೆದಿತ್ತು. ವೇದ ಉಪನಿಷತ್ತುಗಳ ನೆಲೆವೀಡಾಗಿತ್ತು. ಆಧ್ಯಾತ್ಮಿಕ ಮತ್ತು ಪಾರಮಾರ್ಥಿಕ ಚಿಂತನೆ, ಚರ್ಚೆಗಳನ್ನು ನಡೆಸುತ್ತಿದ್ದ ಋಷಿಮುನಿಗಳಿದ್ದರು. ಪ್ರಕೃತಿಯ ಪ್ರಯೋಜನವನ್ನು ಕಂಡುಕೊಂಡಿದ್ದ ಆಯುರ್ವೇದ ಮತ್ತು ಯೋಗ ತಜ್ಞರಿದ್ದರು. ನಳಂದಾ ತಕ್ಷಶಿಲೆಯಂತಹ ವಿಶ್ವವಿದ್ಯಾಲಯಗಳಷ್ಟೇ ಅಲ್ಲದೆ ಗ್ರಾಮ ಗ್ರಾಮಗಳಲ್ಲಿಯೂ ಶಿಕ್ಷಣ ವ್ಯವಸ್ಥೆ ಇತ್ತು ಎಂದು ತಮ್ಮ ಮಾತುಗಳ ಮೂಲಕ ಸಂದೇಶ ಸಾರಿದ್ದಾರೆ.
Kshetra Samachara
15/08/2022 02:56 pm