ಉಡುಪಿ: ಕರಾವಳಿ ಎಂದ ತಕ್ಷಣ ಕಣ್ಣ ಮುಂದೆ ಬರೋದೇ ಯಕ್ಷಗಾನ ಕಲೆ. ಇಲ್ಲಿ ಸಾವಿರಾರು ಕಲಾವಿದರು ಈ ಕಲೆಯನ್ನೇ ನಂಬಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಮಳೆಗಾಲದಲ್ಲಿ ಏನು ಮಾಡುವುದು? ಇದಕ್ಕೆ ಕಲಾವಿದರು ಕಂಡುಕೊಂಡ ಮಾರ್ಗವೇ ಈ ಚಿಕ್ಕಮೇಳ.
ನವೆಂಬರ್ ನಿಂದ ಮೇ ವರೆಗೂ ಉಡುಪಿ ಜಿಲ್ಲೆಗಳಲ್ಲಿ ಸುಮಾರು 40ಕ್ಕೂ ಹೆಚ್ಚು ಮೇಳಗಳು ತಿರುಗಾಟ ನಡೆಸುತ್ತವೆ. ಆದರೆ ಮಳೆಗಾಲದಲ್ಲಿ ಇದು ಕಷ್ಟ ಸಾಧ್ಯ ಈ ಕಾರಣದಿಂದ ಹಿಂದಿನ ಕಾಲದಿಂದಲೂ ಮಳೆಗಾಲದಲ್ಲಿ ಚಿಕ್ಕ ಮೇಳಗಳು ತಿರುಗಾಟ ನಡೆಸುತ್ತವೆ. ಕೇವಲ 4 ಅಥವಾ 5 ಜನ ಕಲಾವಿದರು ಮನೆಮನೆಗೆ ತೆರಳಿ ಅಲ್ಪಾವಧಿಯ ಯಕ್ಷಗಾನ ಸೇವೆ ಸಲ್ಲಿಸುತ್ತಾರೆ. ಒಂದು ಊರಿನ ಹಲವು ಮನೆಗಳಿಗೆ ತೆರಳಿ ಚಿಕ್ಕ ಮೇಳ ಬರುವ ಸಮಯವನ್ನು ಮೊದಲೇ ತಿಳಿಸಲಾಗುತ್ತದೆ.ಸಂಜೆ 7ರಿಂದ ರಾತ್ರಿ 10ರ ತನಕ ಚಿಕ್ಕ ಮೇಳಗಳು ತಿರುಗಾಟ ನಡೆಸುತ್ತವೆ. ಮನೆಗೆ ಬಂದ ಕಲಾ ತಂಡವನ್ನು ಮನೆಯವರು ಸ್ವಾಗತಿಸುತ್ತಾರೆ. ಹೂ, ಹಣ್ಣು ಅಕ್ಕಿ ತೆಂಗಿನಕಾಯಿ ಮತ್ತು ದೀಪ ಇಟ್ಟು ಅಲ್ಲಿ ಪ್ರಾರ್ಥನೆ ಸಲ್ಲಿಸಿ, ಯಾವುದಾದರೂ ಒಂದು ಪ್ರಸಂಗದ ಚಿಕ್ಕ ಭಾಗವನ್ನು ಮನೆಯಲ್ಲಿ ಪ್ರದರ್ಶಿಸುತ್ತಾರೆ.
ಒಂದು ಸ್ತ್ರೀ ವೇಷ ಇನ್ನೊಂದು ಪುರುಷ ವೇಷಧಾರಿ ಮತ್ತು ಹಿಮ್ಮೇಳದ ಇಬ್ಬರು ಕಲಾವಿದರು ಮಾತ್ರ ಚಿಕ್ಕಮೇಳದಲ್ಲಿರುತ್ತಾರೆ. ಪ್ರತಿ ಮನೆಯಲ್ಲಿ ಸಿಕ್ಕಿದ ಕಾಣಿಕೆಯನ್ನು ಪಡೆದು ಮರುದಿನ ಇನ್ನೊಂದು ಊರಿಗೆ ಹೋಗುತ್ತಾರೆ. ಈ ವರ್ಷದ ಮಳೆ ಬಿರುಸು ಪಡೆದಿರುವುದರಿಂದ ಜಿಲ್ಲೆಯ ಅಲ್ಲಲ್ಲಿ ಚಿಕ್ಕಮೆಳಗಳ ತಿರುಗಾಟ ಶುರುವಾಗಿವೆ.
ವರದಿ: ರಹೀಂ ಉಜಿರೆ
Kshetra Samachara
23/06/2022 08:24 pm