ಕಾಪು: ಶರನ್ನವರಾತ್ರಿ ಮಹೋತ್ಸವ ಮತ್ತು ದಸರಾ ಸಂಭ್ರಮಾಚರಣೆಯ ಪ್ರಯುಕ್ತ ರಕ್ಷಣಾಪುರ ಜವನೆರ್‍ನ ಕೂಟ ಕಾಪು ಇವರ ವತಿಯಿಂದ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಬಳಿಯಲ್ಲಿರುವ ಬಂಟರ ಸಂಘದ ಮುಂಭಾಗದಲ್ಲಿ ಆಯೋಜಿಸಲಾದ ಕಾಪು ಪಿಲಿ ಪರ್ಬ-ಹುಲಿ ವೇಷ ಸ್ಪರ್ಧೆಯನ್ನು ಕಾಪು ಹೊಸಮಾರಿಗುಡಿ ದೇವಸ್ಥಾನದ ಅರ್ಚಕ ಶ್ರೀನಿವಾಸ ತಂತ್ರಿಯವರು ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ತುಳುನಾಡಿನ ಜನಪದ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸುವ ಉದ್ದೇಶದೊಂದಿಗೆ ಹುಲಿ ವೇಷ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಉಡುಪಿ, ದಕ್ಷಿಣ ಕನ್ನಡ ಸಹಿತ ವಿವಿಧೆಡೆಯ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದು ವಿಜೇತ ತಂಡಗಳಿಗೆ ಪ್ರಥಮ 1 ಲಕ್ಷ ರೂ., ದ್ವಿತೀಯ 50 ಸಾವಿರ ರೂ. ಹಾಗೂ ವೈಯಕ್ತಿಕ ಬಹುಮಾನಗಳನ್ನು ನೀಡಲಾಗುವುದು ಎಂದರು.
ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ, ಕಾಪು ರಕ್ಷಣಾಪುರ ಜವನೆರ್‍ನ ಕೂಟದ ಅಧ್ಯಕ್ಷ ನವೀನ್ ಶೆಟ್ಟಿ ಪಡುಬಿದ್ರಿ, ಪ್ರಮುಖರಾದ ದೇವಿಪ್ರಸಾದ್ ಶೆಟ್ಟಿ, ನವೀನ್‌ಚಂದ್ರ ಜೆ. ಶೆಟ್ಟಿ, ಹರೀಶ್ ನಾಯಕ್, ಗಣೇಶ್ ಕೋಟ್ಯಾನ್, ಅಖಿಲೇಶ್ ಕೋಟ್ಯಾನ್, ರಮೀಜ್ ಪಡುಬಿದ್ರಿ, ಸೌರಭ್ ಬಲ್ಲಾಳ್, ಶರ್ಫುದ್ದೀನ್ ಶೇಖ್, ಮೊದಲಾದವರು ಉಪಸ್ಥಿತರಿದ್ದರು.
PublicNext
04/10/2022 10:55 pm