ಕಾಪು : ಎರಡು ವರ್ಷಕ್ಕೊಮ್ಮೆ ನಡೆಯುವ ಕರಾವಳಿ ಜಿಲ್ಲೆಗಳು ಮಾತ್ರವಲ್ಲದೇ ದೇಶ ವಿದೇಶಗಳಲ್ಲಿಯೂ ಹೆಸರುವಾಸಿಯಾಗಿರುವ ಕಾಪುವಿನ ಪಿಲಿಕೋಲವು ಇಂದು ಸಂಪನ್ನಗೊಂಡಿತು.
ಇತಿಹಾಸ ಪ್ರಸಿದ್ಧವಾಗಿರುವ ಕಾಪುದ ಪಿಲಿ ಕೋಲ ಅಥವಾ ಹುಲಿ ದೈವದ ಆರಾಧನಾ ಪದ್ದತಿಯು ಇತರೆಡೆಗಳ ಭೂತಾರಾಧನೆಗಿಂತಲೂ ಭಿನ್ನವಾಗಿ ನಡೆಯುತ್ತದೆ. ಪಿಲಿ ಕೋಲಕ್ಕೆ ದಿನ ನಿಗದಿ ಪಡಿಸುವುದುದರಿಂದ ಮೊದಲ್ಗೊಂಡು ಕೋಲದ ಸಮಾಪನೆಯವರೆಗೆ ನಡೆಯುವ ಎಲ್ಲಾ ಆಚರಣೆಗಳು ಕೂಡಾ ಜನರ ನಂಬಿಕೆ, ನಡವಳಿಕೆಗಳನ್ನು ಅನಾವರಣಗೊಳಿಸುವ ಜತೆಗೆ ಧಾರ್ಮಿಕ ಮತ್ತು ಜನಪದಾಸಕ್ತರ ಗಮನ ಸೆಳೆಯುತ್ತದೆ. ಪಿಲಿಕೋಲಕ್ಕೆ ಪೂರ್ವಭಾವಿಯಾಗಿ ಇಲ್ಲಿನ ಪರಿವಾರ ಶಕ್ತಿಗಳಾದ ಮುಗ್ಗೇರ್ಕಳ, ತನ್ನಿಮಾನಿಗ, ಉರಿ ಚೌಂಡಿ, ಗುಳಿಗ ದೈವಗಳು ಮತ್ತು ಪರಿವಾರ ದೈವಗ ಕೋಲವೂ ವಿಜ್ರಂಭಣೆಯಿಂದ ನಡೆಯುತ್ತದೆ.
ಇತಿಹಾಸ ಪ್ರಸಿದ್ಧವಾಗಿರುವ ಕಾಪುವಿನ ಪಿಲಿಕೋಲದಲ್ಲಿ ಭೂತ ನರ್ತಕ (ಪಿಲಿ ವೇಷಧಾರಿ) ಯಾರು ಎನ್ನುವುದು ಹಳೇ ಮಾರಿಯಮ್ಮ ದೇವಿಯ ಸನ್ನಿಧಿ ಯಲ್ಲಿ ನಿರ್ಧಾರವಾಗುತ್ತದೆ. ಪಿಲಿಕೋಲ ಕೋಲದ ದಿನದಂದು ಸಂಪ್ರದಾಯ ಬದ್ಧ ವಿವಿಧ ಸಿದ್ಧತೆಗಳನ್ನು ನಡೆಸಿದ ಬಳಿಕ ಸಂಪ್ರಧಾಯದಂತೆ ಸ್ನಾನ ಮಾಡಿಸಿ ಬಣ್ಣಗಾರಿಕೆಗಾಗಿ ಒಲಿ ಮದೆ(ಒಲಿ ಗುಂಡ)ಯೊಳಗೆ ಕಳುಹಿಸಲಾಗುತ್ತದೆ. ಕೇವಲ ಸಿರಿ ಒಲಿಗಳಿಂದಲೇ ಸಿಂಗಾರಗೊಳ್ಳುವ ವಿಶೇಷ ಪಂಜರಗಳಿಂದ ಹುಲಿ ಹೊರ ಬರುತ್ತದೆ. ಆ ಮೂಲಕ ಪಿಲಿ ಕೋಲ ಆರಂಭಗೊಳ್ಳುತ್ತದೆ.
ಎರಡು ವರ್ಷಕ್ಕೊಮ್ಮೆ ನಡೆಯುವ ಪಿಲಿ ಕೋಲವನ್ನು ವೀಕ್ಷಿಸಲು ಕರಾವಳಿ ಜಿಲ್ಲೆಗಳು ಮಾತ್ರವಲ್ಲದೇ ಎಲ್ಲೆಡೆಯಿಂದ ಜನ ಸಾಗರವೇ ಹರಿದು ಬಂದಿದೆ. ಕೊರೊನಾ ಮಹಾಮಾರಿಯಿಂದ ದ್ವೈವಾರ್ಷಿಕವಾಗಿ ನಡೆಯಬೇಕಿದ್ದ ಪಿಲಿಕೋಲ ನಾಲ್ಕು ವರ್ಷಗಳ ನಂತರ ನಡೆಯುವಂತಾಗಿದೆ. ಸಾವಿರಾರು ಮಂದಿ ಪಿಲಿಕೋಲವನ್ನು ಕಣ್ಣಾರೆ ಕಂಡು ಸಂಭ್ರಮಿಸಿದರು.
Kshetra Samachara
14/05/2022 06:23 pm