ಯಕ್ಷಗಾನ ಚಂಡೆ ವಾದನದಲ್ಲಿ ಪ್ರಪ್ರಥಮವಾಗಿ ಇಂಡಿಯಾಸ್ ವರ್ಲ್ಡ್ ರೆಕಾರ್ಡ್ ದಾಖಲೆಯಾಗಿದೆ. ಪ್ರಖ್ಯಾತ ಚಂಡೆವಾದಕ ಕೌಶಿಕ್ ರಾವ್ ಪುತ್ತಿಗೆಯವರು ಕೇವಲ ಒಂದು ನಿಮಿಷದಲ್ಲಿ 192 ಬಾರಿ ತ ರಿ ಕಿ ಟ ತ ಕ ಏಕತಾಳದ ಉರುಳಿಕೆಯನ್ನು ನುಡಿಸುವ ಮೂಲಕ ಅವರು ಈ ಸಾಧನೆ ಮಾಡಿದ್ದಾರೆ.
ಚಂಡೆ ವಾದನದಲ್ಲಿ ಅವರು 'ತ ರಿ ಕಿ ಟ ತ ಕ' ಎಂಬ ಆರು ಅಕ್ಷರವನ್ನು 1 ನಿಮಿಷದಲ್ಲಿ 192 ಸಲ ಉರುಳಿಕೆ (6×192=1152) ಮಾಡಿದ್ದಾರೆ. ಈ ಒಂದು ನಿಮಿಷದ ವೀಡಿಯೋವನ್ನು ಅವರು ಜೆಮ್ ಶೆಡ್ ಪುರದಲ್ಲಿರುವ ಐಡಬ್ಲ್ಯುಆರ್ ಫೌಂಡೇಶನ್ ಗೆ ಕಳುಹಿಸಿದ್ದರು. ಈ ವೀಡಿಯೋವನ್ನು ಪರಿಣತ ಸಾಧಕರಲ್ಲಿ ಪರೀಕ್ಷಿಸಲಾಗಿದೆ. ಅಲ್ಲದೆ ಇಬ್ಬರು ತೀರ್ಪುಗಾರರ ಮೂಲಕ ಚಂಡೆ ವಾದನವನ್ನು ಪರಿಶೀಲನೆ ನಡೆಸಿ ಅವರ ಶಿಫಾರಸು ಮೇರೆಗೆ ಈ ದಾಖಲೆಯನ್ನು ಪರಿಗಣಿಸಲಾಗಿದೆ.
ದಾಖಲೆ ಏಕೆ?
ತ ರಿ ಕಿ ಟ ತ ಕ ವನ್ನು ಸಿಂಗಲ್ ಆಗಿ ಎಷ್ಟು ಹೊತ್ತು ಬೇಕಾದರೂ ನುಡಿಸಬಹುದು. ಇದನ್ನೇ ನಾಲ್ಕನೇ ಕಾಲದಲ್ಲಿ ನುಡಿಸಬೇಕಾದರೆ ಚಂಡೆಯಲ್ಲಿ ಪಳಗಿದವರಿಗೆ ಮಾತ್ರ ಸಾಧ್ಯವಾದೀತು. ಎರಡು ವಾರಗಳ ಹಿಂದೆ ಕೌಶಿಕ್ ರಾವ್ ಪುತ್ತಿಗೆಯವರು ಮನೆಯಲ್ಲಿಯೇ ಚಂಡೆ ನುಡಿಸಿ ವೀಡಿಯೋ ದಾಖಲೀಕರಣ ಮಾಡಿದ್ದರು. ಈ ವೀಡಿಯೋವನ್ನು ದಾಖಲೆಗಳ ಸಹಿತ ಮೈಲ್ ಮಾಡಿದ್ದರು. ಏಳೆಂಟು ದಿನಗಳಲ್ಲಿ ಅಪ್ರೂವಲ್ ಆಗಿ ಇಂಡಿಯಾಸ್ ವರ್ಲ್ಡ್ ರೆಕಾರ್ಡ್ ದಾಖಲೆಯಾಗಿದೆ.
ಈ ದಾಖಲೆ ಸಾಮಾನ್ಯ ಚಂಡೆ ವಾದಕರಿಗೆ ಸಾಧ್ಯವಿಲ್ಲ. ನಾನು ದಾಖಲೆ ಬರೆಯಬೇಕೆಂಬ ಉದ್ದೇಶದಿಂದ ಸಾಧನೆ ಮಾಡಿಲ್ಲ. ಯಕ್ಷಗಾನದಲ್ಲಿ ಮುಂದೆಯೂ ಇಂತಹ ಸಾಧನೆ ಆಗಬೇಕೆಂಬ ಉದ್ದೇಶದಿಂದ ಮಾಡಿದ್ದೇನೆ. ಯಕ್ಷಗಾನದಲ್ಲಿ ಇದು ಪ್ರಥಮ ದಾಖಲೆ. ಇದು ಮುಂದೆ ಸಾಧನೆ ಮಾಡಿರುವವರಿಗೆ ಪ್ರೇರಣೆಯಾಗಲಿ. ಮುಂದಿನ ದಿನಗಳಲ್ಲಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಬೇಕುವ ಉದ್ದೇಶವಿದೆ. ಅದಕ್ಕೆ ತಯಾರಿ ನಡೆಸುತ್ತಿದ್ದೇನೆ ಎಂದು ಕೌಶಿಕ್ ರಾವ್ ಪುತ್ತಿಗೆ ಹೇಳಿದರು.
PublicNext
26/07/2022 02:53 pm