ಉಡುಪಿ: ಉಡುಪಿಯ ಮರ್ಣೆ ಗ್ರಾಮದ ಯುವ ಕಲಾವಿದ ಮಹೇಶ್ ಮರ್ಣೆ ಸಾಧನೆಗೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಅಶ್ವಥ ಎಲೆಯಲ್ಲಿ ಪ್ರಸಿದ್ಧ ವ್ಯಕ್ತಿಗಳ ಚಿತ್ರ ಮೂಡಿಸುವ ಅಪರೂಪದ ಕಲಾವಿದ ಮಹೇಶ್. ಇವರ ಈ ವಿಶಿಷ್ಠ ಪ್ರತಿಭೆಗೆ ಕ್ರಿಕೆಟ್ ಗಾಡ್ ಸಚಿನ್ ತೆಂಡೂಲ್ಕರ್ ಫಿದಾ ಆಗಿದ್ದಾರೆ. ಅಷ್ಟೇ ಅಲ್ಲದೆ ಮತ್ತೊಂದು ದಾಖಲೆಗೂ ಭಾಜನರಾಗಿದ್ದಾರೆ.
ಈ ಬಾರಿ ಅಶ್ವಥ ಎಲೆಯಲ್ಲಿ ಅತ್ಯಂತ ಸೂಕ್ಷ್ಮವಾಗಿ ಬ್ಲೇಡ್ ಸಹಾಯದಿಂದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರ ಭಾವ ಚಿತ್ರವನ್ನು ರಚಿಸಿದ್ದಾರೆ. ಕೇವಲ 7 ನಿಮಿಷದಲ್ಲಿ ಲೀಫ್ ಆರ್ಟ್ ರಚಿಸಿ ಎಕ್ಸ್ ಕ್ಲ್ಯೂಸಿವ್ ವಲ್ಡ್ ರೆಕಾರ್ಡ್ ಪುಟ ಸೇರಿದ್ದಾರೆ. ಈ ಸಾಧನೆಗಾಗಿ ಸಚಿನ್ ಅವರ ಅಪರೂಪದ ಫೋಟೋಗಳು ಮತ್ತು ಸಹಿ ಇರುವ ಸರ್ಟಿಫಿಕೇಟ್ ಮಹೇಶ್ ಕೈಸೇರಿವೆ.
2015ರಲ್ಲಿ 3500 ಐಸ್ ಕ್ರೀಮ್ ಕಡ್ಡಿ ಮತ್ತು 750 ಬೆಂಕಿ ಕಡ್ಡಿಯಿಂದ ರಚಿಸಿದ ಗಣಪತಿಯ ಕಲಾಕೃತಿಯ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರ್ಪಡೆಯಾಗಿ ಸಾಧನೆ ಮಾಡಿದ್ದರು. ಹಲವು ಪ್ರಸಿದ್ಧ ವ್ಯಕ್ತಿಗಳ ಭಾವಚಿತ್ರವನ್ನು ಅಶ್ವಥ ಎಲೆಯಲ್ಲಿ ರಚಿಸುವ ಮೂಲಕ ಮಹೇಶ್ ಮರ್ಣೆ ಈಗಾಗಲೇ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸಚಿನ್ ಪ್ರಶಂಸೆ ಹೀಗಿದೆ:
ಈ ದಾಖಲೆಯ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಸಚಿನ್ ತೆಂಡೂಲ್ಕರ್ ಮಹೇಶ್ ಮರ್ಣೆ ಅವರಿಗೆ ಪ್ರಶಂಸಾಪತ್ರವನ್ನು ಕಳುಹಿಸಿದ್ದಾರೆ. " ನನ್ನ ಮೇಲೆ ಪ್ರೀತಿ ಇಟ್ಟು ನೀವು ರಚಿಸಿರುವ ಕಲಾಕೃತಿ ಕಂಡು ನಾನು ಬೆರಗಾಗಿದ್ದೇನೆ. ನೀವು ನನ್ನ ಮೇಲೆ ತೋರಿಸಿರುವ ಪ್ರೀತಿಗೆ ಪ್ರತಿಯಾಗಿ ನನ್ನ ಸಂಗ್ರಹದಲ್ಲಿರುವ ಎರಡು ಅಮೂಲ್ಯ ಫೋಟೋಗಳನ್ನು ನಿಮಗೆ ಕಳುಹಿಸುತ್ತಿದ್ದೇನೆ. ನನ್ನ ಎರಡನೇ ಇನ್ನಿಂಗ್ಸ್ ಗೂ ಕೂಡಾ ನೀವು ತೋರಿಸುತ್ತಿರುವ ಪ್ರೀತಿ ಮತ್ತು ಬೆಂಬಲ ನನಗೆ ಪ್ರೇರಣೆಯಾಗಿದೆ".
Kshetra Samachara
15/06/2022 05:14 pm