ಮಂಗಳೂರು: ಮಂಗಳೂರಿಗೆ ಭೇಟಿ ನೀಡಿದ ಕಾಂತಾರ ಸಿನೆಮಾ ನಟ, ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ತಂಡ ಸಿನಿಮಾ ಯಶಸ್ಸನ್ನು ಮಂಗಳೂರಿನ ಜನರ ಜೊತೆ ಹಂಚಿಕೊಂಡಿದ್ದಾರೆ. ನಗರ ಸಿನಿಮಾ ಥಿಯೇಟರ್ಗಳಿಗೆ ಭೇಟಿ ನೀಡಿ ಅಭಿಮಾನಿಗಳ ಜೊತೆ ಮಾತುಕತೆ ನಡೆಸಿದ ತಂಡ ಸಿನಿಮಾ ಯಶಸ್ಸುಗೊಳಿಸಿದ್ದಕ್ಕೆ ಧನ್ಯವಾದ ತಿಳಿಸಿತು.
ಸಂಜೆ ಮಂಗಳೂರು ದಸರಾ ಹಿನ್ನಲೆಯಲ್ಲಿ ಕರಾವಳಿ ಮೈದಾನದಲ್ಲಿ ನಡೆಯುತ್ತಿದ್ದ ಪಿಲಿ ನಲಿಕೆ ಕಾರ್ಯಕ್ರಮದಲ್ಲೂ ತಂಡ ಭಾಗವಹಿಸಿತ್ತು. ನಟ ರಿಷಬ್ ಶೆಟ್ಟಿ, ನಟಿ ಸಪ್ತಮಿ ಗೌಡ, ಪ್ರಮೋದ್ ಶೆಟ್ಟಿ ಹಾಗೂ ಸಿನಿಮಾದಲ್ಲಿ ನಟಿಸಿದ್ದ ಪ್ರಮುಖ ನಟರು ಭಾಗವಹಿಸಿದ್ರು. ಸಿನಿಮಾ ತಂಡ ವೇದಿಕೆಗೆ ಆಗಮಿಸ್ತಾ ಇದ್ದಂತೆ ಸಾವಿರಾರು ಜನ ಹರ್ಷೋದ್ಗಾರದ ಜೊತೆ ಸ್ವಾಗತ ಕೋರಿದ್ರು.
ಇದೇ ವೇಳೆ ಪಿಲಿನಲಿಕೆ ವೇದಿಕೆಯಲ್ಲಿ ಕಾಂತಾರ ಚಿತ್ರದ ಟ್ರೇಲರ್ ಪ್ರದರ್ಶಿಸಿದಾಗಲೂ ಜನರು ಶಿಳ್ಳೆ ಹೊಡೆದು ಸಂಭ್ರಮಿಸಿದ್ರು. ಬಳಿಕ ಮಾತನಾಡಿದ ರಿಷಬ್ ಶೆಟ್ಟಿ ಕಾಂತಾರ ಸಿನಿಮಾದ ಮೇಕಿಂಗ್ ಬಗ್ಗೆ ಮಾತನಾಡಿ ಕಂಬಳದ ಸೀನ್ಗೆ ತಾನು ಯಾವ ರೀತಿ ತಯಾರಿ ನಡೆಸಿದ್ದೆ ಅನ್ನೋ ಅನುಭವವನ್ನು ಹಂಚಿಕೊಂಡ್ರು.
ತುಳುನಾಡಿನ ದೈವಾರಾಧನೆಯ ಎಳೆಯನ್ನು ಇಟ್ಟುಕೊಂಡು ಮಾಡಿರೋ ಸಿನಿಮಾದ ಮೂಲ ಉದ್ದೇಶದ ಬಗ್ಗೆಯೂ ಜನರಿಗೆ ಮಾಹಿತಿ ನೀಡಿದ್ರು. ಇದೇ ವೇಳೆ ವೇದಿಕೆಗೆ ಆಗಮಿಸಿದ ನಟ ರಾಜ್ ಬಿ ಶೆಟ್ಟಿ ಅವರು ಹುಲಿ ಕುಣಿತದ ಬ್ಯಾಂಡ್ಗೆ ಸ್ಟೆಪ್ ಹಾಕುವ ಮೂಲಕ ಪ್ರೇಕ್ಷಕರನ್ನು ಹುಚ್ಚೆಬ್ಬಿಸುವಂತೆ ಮಾಡಿದ್ರು. ಪಿಲಿನಲಿಕೆ ತಂಡದಿಂದ ಹೊಂಬಾಳೆ ಫಿಲಂ ತಂಡಕ್ಕೆ ಗೌರವ ಸಲ್ಲಿಸಿ ಸ್ಮರಣಿಕೆ ನೀಡಿ ಗೌರವಿಸಲಾಯ್ತು . ಈ ವೇಳೆ ಮೂಡಬಿದ್ರೆ ಆಳ್ವಾಸ್ ಕಾಲೇಜಿನ ನಿರ್ದೇಶಕ ಡಾ ಮೋಹನ್ ಆಳ್ವಾ , ಸಂಗೀತ ನಿರ್ದೇಶಕ ಗುರುಕಿರಣ್ ಚಿತ್ರ ತಂಡಕ್ಕೆ ಶುಭ ಕೋರಿದ್ರು.
PublicNext
05/10/2022 04:30 pm