ಮೂಡುಬಿದಿರೆ: ನೀವು ಹೆಚ್ಚು ಇಷ್ಟಪಡುವುದನ್ನು ನಿಮ್ಮ ವೃತ್ತಿಯಾಗಿ ಆರಿಸಿಕೊಂಡರೆ ನಿಮ್ಮ ಜೀವನ ಅದ್ಭುತವಾಗುತ್ತದೆ. ಮನುಷ್ಯನು ಜೀವನೋಪಾಯಕ್ಕಾಗಿ ಮತ್ತು ಆತ್ಮ ತೃಪ್ತಿಗಾಗಿ ದುಡಿಯುತ್ತಾನೆ. ಒಂದೇ ಕೆಲಸದಿಂದ ಎರಡೂ ಉದ್ದೇಶಗಳನ್ನು ಪೂರೈಸಿದರೆ ಜೀವನ ಸಾರ್ಥಕವಾಗುತ್ತಾದೆ. ಮಾತು ಮತ್ತು ಬರವಣಿಗೆಗಳಿಂದ ವ್ಯಕ್ತಿತ್ವವನ್ನು ರೂಪಿಸಲು ಸಾಧ್ಯ. ಹೃದಯಕ್ಕೆ ಹತ್ತಿರವಾದುದನ್ನು ಆಯ್ದು ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಶಿಕ್ಷಣವು ನಮ್ಮ ಭವಿಷ್ಯದ ಬಾಗಿಲಿಗೆ ಕೀಲಿಕೈ. ಶಿಕ್ಷಣದ ಪರಿಭಾಷೆಯಲ್ಲಿ ನೈತಿಕತೆಗೆ ಹೆಚ್ಚಿನ ಪ್ರಾಮುಖ್ಯತೆ ಸಿಗುವಂತಾಗಬೇಕು. ನಿಮ್ಮ ಜೀವನದಲ್ಲಿ ಒಂದು ಗುರಿಯನ್ನು ಮನಸ್ಸಿನಲ್ಲಿಟ್ಟುಕೊಂಡಾಗ ಗಮ್ಯದ ಜೊತೆಗೆ ನಡೆಯುವ ದಾರಿಯಲ್ಲೂ ನೈತಿಕತೆ ಮುಖ್ಯವಾಗುತ್ತದೆ. ನೈತಿಕ ಮೌಲ್ಯದ ಪಾಠವು ಶಿಕ್ಷಣದ ಉದ್ದೇಶವನ್ನು ಸಾಕಾರಗೊಳಿಸುತ್ತದೆ ಎಂದು ಸುವರ್ಣ ನ್ಯೂಸ್‌ನ ಪ್ರಧಾನ ಸಂಪಾದಕ ಅಜಿತ್ ಹನುಮಕ್ಕನವರ್ ತಿಳಿಸಿದರು.
ಅವರು ಭಾನುವಾರ ಗಾಂಧಿ ಜಯಂತಿಯ ಪ್ರಯುಕ್ತ ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾ ಸಂಸ್ಥೆಯಲ್ಲಿ ನಡೆದ "ಶಿಕ್ಷಣ ಮತ್ತು ನೈತಿಕ ಮೌಲ್ಯಗಳು" ಎಂಬ ವಿಷಯದ ಕುರಿತು ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯಗಳ ಕುರಿತು ತಿಳಿ ಹೇಳಿದರು.
ಸಾವಿರಾರು ಬದಲಾವಣೆಗಳಿಗೆ ಸಾಕ್ಷಿಯಾಗುತ್ತಿರುವ ಇಂದಿನ ತಲೆಮಾರು ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧಾತ್ಮಕ ಮನೋಭಾವದಿಂದ ನೈತಿಕತೆಯನ್ನು ಮರೆಯಬಾರದು ಎಂದರು.
ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಅಧ್ಯಕ್ಷತೆಯನ್ನು ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ವಹಿಸಿದ್ದರು.
PublicNext
02/10/2022 08:29 pm